ಬೆಂಗಳೂರು: ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ತೆಗೆದುಕೊಂಡ ಗಡುವು ಮುಗಿತಾ ಬಂದಿದೆ. ಆದರೆ ಯಾವುದೇ ಬೇಡಿಕೆಗಳು ಇನ್ನೂ ಅನುಷ್ಠಾನಗೊಂಡು ಕಾರ್ಯರೂಪಕ್ಕೆ ಬಂದಿಲ್ಲ. ಈ ಬಾರಿಯ ಬಜೆಟ್ನಲ್ಲಿ ಪ್ರಮುಖ ಬೇಡಿಕೆಯೊಂದು ಈಡೇರುವ ಆಸೆ ಕೂಡ ನಿರಾಸೆಯಾಗಿದೆ. ಈ ಹಿನ್ನೆಲೆ ಇವತ್ತು ದಿಢೀರ್ ಸಭೆ ಕರೆದ ಸಾರಿಗೆ ನೌಕರರ ಕೂಟ ಮುಷ್ಕರ ವಿಚಾರವಾಗಿ ಒಂದು ನಿರ್ಧಾರಕ್ಕೆ ಬಂದಿದೆ.
ಸಾರಿಗೆ ನೌಕರರು 10 ಬೇಡಿಕೆಗಳನ್ನ ಸರ್ಕಾರದ ಮುಂದಿಟ್ಟು ಕಳೆದ ಡಿಸೆಂಬರ್ 10 ರಂದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸಾರಿಗೆ ನೌಕರರ ಕೂಟ ಪ್ರತಿಭಟನಾ ಱಲಿ ನಡೆಸಿದ್ರು. ಅಂದು ಸರ್ಕಾರದಿಂದ ಯಾರೊಬ್ಬರೂ ಮನವಿ ಪತ್ರ ಸ್ವೀಕಾರ ಮಾಡಲು ಹೋಗದೆ, ಪೊಲೀಸರ ಮೂಲಕ ಎಲ್ಲರನ್ನ ವಶಕ್ಕೆ ಪಡೆದ ಸರ್ಕಾರ ಮುಂದೆ ದೊಡ್ಡ ಸಮಸ್ಯೆಗೆ ಸಿಲುಕಿತ್ತು.
ಸಾರಿಗೆ ನೌಕರರು ಅಂದು ಬೆಳಗ್ಗೆಯಿಂದಲೇ ಏಕಾಏಕಿ ಬಸ್ ಸಂಚಾರ ಬಂದ್ ಮಾಡಿ 4 ದಿನಗಳ ಕಾಲ ಮಿಂಚಿನ ಮುಷ್ಕರ ನಡೆಸೋ ಮೂಲಕ ಸರ್ಕಾರದ ಧೋರಣೆ ವಿರುದ್ಧ ತೊಡೆತಟ್ಟಿದ್ದರು. ಆಗ ಸರ್ಕಾರದ ಸಾಲು ಸಾಲು ಸಚಿವರು ಮಧ್ಯಪ್ರವೇಶ ಮಾಡಿ 10 ಬೇಡಿಕೆಗಳಲ್ಲಿ ಪ್ರಮುಖ ಬೇಡಿಕೆಯಾದ ಸಾರಿಗೆ ನೌಕರರನ್ನ ಸರ್ಕಾರಿ ನೌಕರರಾಗಿ ಘೋಷಣೆ ಮಾಡುವ ಒಂದು ಬೇಡಿಕೆ ಬಿಟ್ಟು ಉಳಿದ 9 ಬೇಡಿಕೆ ಈಡೇರಿಸುವ ಭರವಸೆ ನೀಡಿ, ಮುಷ್ಕರ ವಾಪಸ್ ಪಡೆಯುವಂತೆ ಮಾಡಿದ್ರು. ಬೇಡಿಕೆ ಈಡೇರಿಕೆಗೆ 3 ತಿಂಗಳ ಕಾಲಾವಕಾಶ ಕೂಡ ಕೂಟದಿಂದ ನೀಡಲಾಗಿತ್ತು.
ಕೆಲವು ಬೇಡಿಕೆಗಳ ಈಡೇರಿಕೆ ನಿಗಮಗಳಿಗೆ ಸೂಚನೆ ಕೂಡ ನೀಡಲಾಗಿತ್ತು. ಆದರೆ ಈವರೆಗೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ ಹಾಗೂ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ಅಡಿಯಲ್ಲಿ ತರುವ ಕಾರ್ಯದ ಪ್ರಗತಿಯೇ ಶುರುವಾಗಿಲ್ಲ ಎಂದು ಆರೋಪಿಸಿ ಸಾರಿಗೆ ನೌಕರರ ಕೂಟ, ಸರ್ಕಾರಕ್ಕೆ ಒತ್ತಡ ತರಲು ಇತ್ತೀಚೆಗೆ ಒಂದು ದಿನದ ಉಪವಾಸ ಧರಣಿ ನಡೆಸಿ, ಈ ಬಾರಿಯ ಬಜೆಟ್ ನಲ್ಲಿ ಈ ಬೇಡಿಕೆ ಕುರಿತು ಅಲೋಕೇಶನ್ ಆಗ ಬೇಕು ಅಂತ ಒತ್ತಾಯಿಸಿತ್ತು. ಜೊತೆಗೆ ಈ ಮಾರ್ಚ್ 15ರ ಒಳಗೆ ಬೇಡಿಕೆ ಈಡೇರದೆ ಇದ್ದರೆ 16 ರಿಂದ ಕುಟುಂಬ ಸಮೇತ ಮುಷ್ಕರ ನಡೆಸುವ ಎಚ್ಚರಿಕೆಯನ್ನ ನೀಡಲಾಗಿತ್ತು.
ನಿನ್ನೆ ನಡೆದ ಬಜೆಟ್ನಲ್ಲಿ ಸಾರಿಗೆ ನೌಕರರನ್ನ 6ನೇ ವೇತನ ಆಯೋಗದ ಅಡಿಯಲ್ಲಿ ತರುವ ಅಥವಾ ಅದಕ್ಕೆ ಸರಿಸಮನಾದ ವೇತನ ನೀಡುವ ಯಾವೊಂದು ವಿಚಾರವಾಗಲಿ, ಯಾವುದೇ ಅನುದಾನವಾಗಲಿ ಘೋಷಣೆಯಾಗದ ಕಾರಣ ಸಾರಿಗೆ ನೌಕರರ ಕೂಟ ಇಂದು ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಗಾಂಧಿನಗರದ ಕೋಡಿಹಳ್ಳಿ ಕಚೇರಿಯಲ್ಲಿ ಸಭೆ ನಡೆಸಿ ಸರ್ಕಾರದ ನಡೆಯನ್ನ ಖಂಡಿಸಿದ್ರು, ಸರ್ಕಾರಕ್ಕೆ ಮತ್ತೊಂದು ಡೇಟ್ ಕೊಡುತ್ತೇವೆ. ಆಗಲೂ ಬೇಡಿಕೆ ಈಡೇರದೆ ಇದ್ರೆ, ಮುಂದಿನ ದಾರಿ ಒಂದೇ ಅದು ಬಸ್ ಮುಷ್ಕರ ನಡೆಸೋದು ಅಂತ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ಕೊಟ್ಟರು.
ಉಗ್ರ ಹೋರಾಟದ ಎಚ್ಚರಿಕೆ
ಕಳೆದ ಬಾರಿ ಮುಷ್ಕರ ನಡೆಸಿದಾಗ ಸಾರಿಗೆ ನೌಕರರ ಕೂಟ ಟ್ರೇಡ್ ಯೂನಿಯನ್ನಲ್ಲಿ ರಿಜಿಸ್ಟರ್ ಆಗಿರಲಿಲ್ಲ. ಆದರೆ ಈಗ ನೋಂದಣಿ ಆಗಿರುವ ಕಾರಣ ಕಳೆದ ಬಾರಿಯಂತೆ ಏಕಾಏಕಿ ಮುಷ್ಕರ ನಡೆಸುವಂತಿಲ್ಲ. ಆ ಕಾರಣಕ್ಕೆ 15ರ ಗಡುವು ಮುಗಿದ ನಂತರ ಇದೆ 16 ರಂದು ಸರ್ಕಾರ ಹಾಗೂ ಕಾರ್ಮಿಕ ಇಲಾಖೆಗೆ ಮನವಿ ಸಲ್ಲಿಸಿ, ಕಾರ್ಮಿಕ ಕಾಯಿದೆ ಪ್ರಕಾರ 22 ದಿನ ಗಡುವು ನೀಡಲಾಗುವುದು. ಆಗಲು ನಮ್ಮ 9 ಬೇಡಿಕೆ ಈಡೇರದೆ ಇದ್ದರೆ ಏಪ್ರಿಲ್ 7ಕ್ಕೆ ಬಂದ್ ಮುಷ್ಕರ ಮಾಡಲಾಗುವುದು ಎಂದು ಕೋಡಿಹಳ್ಳಿ ಸರ್ಕಾರಕ್ಕೆ ಮತ್ತೊಂದು ಡೆಡ್ ಲೈನ್ ಕೊಟ್ಟಿದ್ದಾರೆ. ಈ ಬಜೆಟ್ನಲ್ಲಿಯೂ ಸರ್ಕಾರ ಸಾರಿಗೆ ನೌಕರರನ್ನ ಕಡೆಗಣಿಸಿದೆ. ಬಜೆಟ್ ನಿಂದ ನಮಗೆ ಸುಗ್ಗಿ ಆರಂಭವಾಗುತ್ತೆ ಅಂತ ಚಾತಕ ಪಕ್ಷಿಗಳಂತೆ ನಾವು ಕಾದಿದ್ದೆವು. ಆದರೆ ತೀವ್ರ ನಿರಾಸೆಯಾಗಿದ್ದು, ನಮ್ಮ ಮುಂದಿನ ಹೋರಾಟ ತೀವ್ರವಾಗಿರುತ್ತೆ ಅಂತ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಚಂದ್ರಶೇಖರ್ ಸರ್ಕಾರಕೆ ಎಚ್ಚರಿಕೆ ರವಾನಿಸಿದರು.
ಸರ್ಕಾರ ಹಾಗೂ ಸಾರಿಗೆ ನಿಗಮಗಳಿಗೆ 6ನೇ ವೇತನ ಆಯೋಗದ ಜಾರಿ ವಿಚಾರ ಇದೀಗ ನುಂಗಲಾರದ ತುತ್ತಾಗಿದೆ. ಈ ಕಾರಣಕ್ಕೆ ಬೇಡಿಕೆ ಈಡೇರಿಕೆ ವಿಳಂಬವಾಗ್ತಾ ಇದೆ. ಈ ನಡುವೆ ಸರ್ಕಾರಕ್ಕೆ ಮತ್ತೊಂದು ಗಡುವು ಸಿಕ್ಕಿದೆ. ಇದರ ಜೊತೆಯಲ್ಲೇ ಸಾರಿಗೆ ನಿಗಮಗಳ ಎಂಡಿಗಳು ಸಾರಿಗೆ ಸಂಘಟನೆಗಳ ಮುಖಂಡರನ್ನ ಕರೆಸಿ ಸಭೆ ಮೇಲೆ ಸಭೆ ನಡೆಸುತ್ತಾ ಮುಷ್ಕರ ತಡೆಯಲು, ಇಲ್ಲ ಮುಷ್ಕರ ನಡೆದ್ರು ಯಶಸ್ವಿಯಾಗದಂತೆ ಮಾಡುವ ಹರಸಾಹಸದಲ್ಲಿ ತೊಡಗಿದ್ದಾರೆ. ಇದನ್ನೆಲ್ಲಾ ಗಮನಿಸ್ತಾ ಇರೋ ಪ್ರಯಾಣಿಕರು ಮಾತ್ರ ಬೇಗ ಈ ವಿಚಾರ ಇತ್ಯರ್ಥ ಆಗಿ ನಮ್ಮ ಪ್ರಯಾಣಕ್ಕೆ ಯಾವುದೇ ತೊಂದರೆ ಆಗದೆ ಇದ್ರೆ ಸಾಕು ಅನ್ನುವಂತಾಗಿದೆ.