ಬೆಂಗಳೂರು: 1998 ನೇ ಸಾಲಿನ ಕೆಎಎಸ್ ಅಕ್ರಮ ನೇಮಕಾತಿ ಆರೋಪ ಪ್ರಕರಣ ಸಂಬಂಧ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಹಾಗೂ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಗಳ ಮುಂದೆ ಇರುವ ಎಲ್ಲಾ ಅರ್ಜಿಗಳನ್ನು ಒಂದೇ ಕೋರ್ಟ್‌ಗೆ ವರ್ಗಾವಣೆ ಮಾಡಲು ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಈ ಕುರಿತು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ 2016 ರ ಜೂ.21 ರಂದು ನೀಡಿರುವ ತೀರ್ಪು ಜಾರಿಗೊಳಿಸುವಂತೆ ಸಲ್ಲಿಸಿರುವ ಮಧ್ಯಂತರ ಅರ್ಜಿಗಳು, ನ್ಯಾಯಮೂರ್ತಿ ರವಿ ಮಳಿಮಠ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್, ಸಿಎಟಿ ಹಾಗೂ ಕೆಎಟಿ ಕೆಲವು ಮಧ್ಯಂತರ ಆದೇಶಗಳನ್ನು ನೀಡಿರುವುದರಿಂದ ತೀರ್ಪು ಜಾರಿಗೆ ಅಡ್ಡಿಯಾಗುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹಾಗಿದ್ದರೆ ಸರ್ಕಾರ ಅರ್ಜಿ ಸಲ್ಲಿಸಿದರೆ, ಕೋರ್ಟ್ ಎಲ್ಲ ಅರ್ಜಿಗಳನ್ನು ಒಂದೇ ಕೋರ್ಟ್‌ಗೆ ವರ್ಗಾಯಿಸಲಿದೆ. ಆ ನ್ಯಾಯಾಲಯ ವಿಚಾರಣೆ ನಡೆಸಿ, ತೀರ್ಪು ನೀಡಲಿ ಎಂದು ಸಲಹೆ ನೀಡಿ, ವಿಚಾರಣೆಯನ್ನು ಫೆ.7 ಕ್ಕೆ ಮುಂದೂಡಿತು.