ಬೆಂಗಳೂರು: ತಜ್ಞರು ಅಂದಾಜಿಸಿದಂತೆ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ನಿತ್ಯ 2 ಲಕ್ಷಕ್ಕೂ ಹೆಚ್ಚು ಕೋವಿಡ್ ಟೆಸ್ಟ್ಗಳನ್ನು ನಡೆಸಲಾಗ್ತಿದ್ದು, 24 ಗಂಟೆಯಲ್ಲಿ ಪಾಸಿಟಿವಿಟಿ ದರವೂ 12.45% ಕ್ಕೆ ಏರಿಕೆ ಆಗಿದೆ. ಕೋವಿಡ್ ಮುಕ್ತವಾಗಿದ್ದ ಜಿಲ್ಲೆಗಳಲ್ಲೂ ಸೋಂಕು ಹರಡುತ್ತಿದೆ. ಈ ಮಧ್ಯೆ ಸದ್ದಿಲ್ಲದೇ ಸೋಂಕಿತರ ಸಾವಿನ ಸಂಖ್ಯೆಯೂ ಏರಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಡಿಸೆಂಬರ್ ತಿಂಗಳಲ್ಲೊಂದರಲ್ಲಿ ಒಟ್ಟಾರೆ 124 ಸೋಂಕಿತರು ಮೃತಪಟ್ಟಿದ್ದರೆ, ಕಳೆದ 17 ದಿನಗಳಲ್ಲಿ(ಜನವರಿ 1-17) 114 ಸೋಂಕಿತರು ಕೋವಿಡ್‌ನಿಂದ ಮೃತಪಟ್ಟಿರುವುದು ವರದಿಯಾಗಿದೆ. ಮೃತರ ಸಂಖ್ಯೆ ನಿಧಾನವಾಗಿ ದುಪ್ಪಟ್ಟು ಆಗ್ತಿದೆ. ಇದರಲ್ಲಿ 54 ಜನರು ILI (Influenza-like illness) ನಿಂದ ಮೃತಪಟ್ಟಿದ್ದರೆ 56 ಮಂದಿ SARI(Severe acute respiratory infection) ಕೇಸ್ನಿಂದಾಗಿ ಸೋಂಕಿತರ ಸಾವು ಸಂಭವಿಸಿದೆ.
ಡೆತ್ ಆಡಿಟ್ ಮಾಡ್ತೀವಿ: ಸಚಿವ ಸುಧಾಕರ್
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಮೊದಲ ಹಾಗೂ ಎರಡನೇ ಅಲೆಗೆ ಹೋಲಿಸಿದರೆ ಸಾವಿನ ಸರಾಸರಿ ಪ್ರಮಾಣ ಕಡಿಮೆ ಇದೆ. ಸಾವಿನ ಪ್ರಮಾಣ ಕನಿಷ್ಠ ಶೇ.0.04 ರಷ್ಟಿದೆ. ಆದರೂ ಸಾವಿನ ಬಗ್ಗೆ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೆ. ಪ್ರತಿ ಜೀವವೂ ಮುಖ್ಯ, ಹೀಗಾಗಿ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಮತ್ತು ಸಾವಿನ ಬಗ್ಗೆ ಡೆತ್ ಆಡಿಟ್ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ಡೆತ್ ಆಡಿಟ್ ನಡೆಸುವುದರಿಂದ ಯಾರಿಗೆ ಇತರ ಆರೋಗ್ಯ ಸಮಸ್ಯೆಗಳು ಇತ್ತು? ಕೊರೊನಾದಿಂದಲೇ ಸತ್ತಿದ್ದಾರಾ? ಇತರ ಆರೋಗ್ಯ ಸಮಸ್ಯೆಗಳು ಕಾರಣ ಆದ್ವಾ? ಇದೆಲ್ಲವನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಈ ಹಿಂದೆಯೂ ಆರೋಗ್ಯ ಇಲಾಖೆ ಡೆತ್ ಆಡಿಟ್ ನಡೆಸಿತ್ತು. ಆಗ ಹೆಚ್ಚಿನ ಸೋಂಕಿತರ ಸಾವು ಆರೋಗ್ಯ ಸಮಸ್ಯೆ ಇರುವವರೇ ಆಗಿದ್ದರು. ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ ಇರುವವರು ಹೆಚ್ಚು ಮೃತಪಟ್ಟಿರುವುದು ಡೆತ್ ಆಡಿಟ್ನಲ್ಲಿ ತಿಳಿದು ಬಂದಿತ್ತು ಎಂದರು.
ಲಸಿಕಾಭಿಯಾನಕ್ಕೆ ಚುರುಕು
ಸದ್ಯ ಲಸಿಕಾ ಅಭಿಯಾನದಿಂದಾಗಿ ಕೋವಿಡ್ ಸೋಂಕಿನಿಂದ ತಪ್ಪಿಸಿಕೊಳ್ಳಲು ಆಗದೇ ಇದ್ದರೂ ತೀವ್ರತರ ರೋಗದಿಂದ, ಸಾವು ಸಂಭವಿಸುವುದನ್ನು ತಡೆಯಬಹುದಾಗಿದೆ. ಹೀಗಾಗಿ ವೇಗವಾಗಿ ಲಸಿಕಾಭಿಯಾನ ನಡೆಯಬೇಕಿದೆ. ಹಲವು ಜಿಲ್ಲೆಗಳಲ್ಲಿ ಲಸಿಕಾಭಿಯಾನ ಮಂದಗತಿಯಲ್ಲಿ ನಡೆಯುತ್ತಿದೆ ಎಂದರು.
7-8 ಜಿಲ್ಲೆಗಳಲ್ಲಿ ಲಸಿಕಾಭಿಯಾನ ಮಂದಗತಿಯಲ್ಲಿ ನಡೆಯುತ್ತಿದೆ. ಇದಕ್ಕೆ ವೇಗ ನೀಡಲು ಡಿಸಿಗಳ ಸಭೆ ಕರೆಯಲಾಗಿದೆ. ಲಸಿಕಾಭಿಯಾನ ಚುರುಕು ಮಾಡಲು ಡಿಸಿಗಳಿಗೆ ಸೂಚನೆ ಕೊಡುತ್ತೇವೆ. ಅದಷ್ಟು ಬೇಗ ಲಸಿಕಾ ಅಭಿಯಾನ ಪೂರ್ಣ ಆಗಬೇಕು ಎಂದರು.
ಏರಿಕೆಯತ್ತ ಸಾವಿನ ಸಂಖ್ಯೆ
10-1-2021- 04- 0.03%
11-1-2021- 05- 0.03%
12-1-2021- 10- 0.04%
13-1-2021- 08 - 0.03%
14-1-2021- 14 0.04%
15-1-2021- 07- 0.02%
16-1-2021- 13- 0.03%
17-1-2021- 14- 0.05%