ಬೆಂಗಳೂರು : ವಿಸ್ತೃತ ಚರ್ಚೆಯ ನಂತರ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕಕ್ಕೆ ವಿಧಾನ ಪರಿಷತ್ ಧ್ವನಿಮತದ ಮೂಲಕ ಅಂಗೀಕಾರ ನೀಡಿತು.
ಪರಿಷತ್ ಕಲಾಪದಲ್ಲಿ ವಿಧೇಯಕ ಮಂಡಿಸಿದ ಕಾನೂನು ಸಚಿವ ಮಾಧುಸ್ವಾಮಿ, ಸಾರ್ವಜನಿಕ ಸ್ಥಳದಲ್ಲಿರುವ ಧಾರ್ಮಿಕ ಕಟ್ಟಡಗಳ ತೆರವು ಪ್ರಕರಣ ಸುಪ್ರೀಂಕೋರ್ಟ್ ಮುಂದೆ ಬಾಕಿ ಇದೆ. ನಾವು ಯಾವುದೇ ಧರ್ಮದ ಧಾರ್ಮಿಕ ಕಟ್ಟಡವನ್ನು ಸಕ್ರಮ ಮಾಡುವ ಅಂಶ ಈ ವಿಧೇಯಕದಲ್ಲಿ ತರುತ್ತಿಲ್ಲ.
ಮುಂದಿನ ನಿರ್ಧಾರ ಕೈಗೊಳ್ಳುವವರೆಗೂ ಸಾರ್ವಜನಿಕ ಸ್ಥಳದಲ್ಲಿ ಇರುವ ಎಲ್ಲಾ ಧಾರ್ಮಿಕ ಕಟ್ಟಡಗಳಿಗೆ ರಕ್ಷಣೆ ಕೊಡಬೇಕು ಎಂದು ವಿಧೇಯಕ ತರಲಾಗಿದೆ ಎಂದು ಮಾಹಿತಿ ನೀಡಿದರು.
2009ರ ನಂತರದ ಧಾರ್ಮಿಕ ಕಟ್ಟಡಗಳ ತೆರವಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಸದ್ಯ ಪ್ರಕರಣ ಸುಪ್ರೀಂಕೋರ್ಟ್ ಮುಂದೆ ಅಂತಿಮ ತೀರ್ಪು ಬರುವುದು ಬಾಕಿ ಇದೆ.
ಅಧಿಕಾರಿಗಳು ಕೋರ್ಟ್ ಆದೇಶ ಎಂದು ಧಾರ್ಮಿಕ ಕಟ್ಟಡಗಳನ್ನು ಒಡೆಯುತ್ತಿದ್ದಾರೆ. ಇದಕ್ಕೆ ತಡೆ ನೀಡಲು ಮಾತ್ರ ಕಾಯ್ದೆ ತರಲಾಗುತ್ತಿದೆ. ಸಮಾಜದಲ್ಲಿ ಏರುಪೇರಾಗಬಾರದು ಎನ್ನುವುದು ಇದರ ಉದ್ದೇಶ. ಹಾಗಾಗಿ, ಬಿಲ್ ಪಾಸ್ ಮಾಡಿ ಎಂದು ಮನವಿ ಮಾಡಿದರು.
'ಧಾರ್ಮಿಕ ಕಟ್ಟಡಗಳ ಮುಖ ಉಳಿಸಬೇಕಿದೆ'
ವಿಧೇಯಕದ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ನಂಜನಗೂಡು ಘಟನೆ ನಂತರ ಮುಖ ಉಳಿಸಿಕೊಳ್ಳಲು ಈ ಕಾಯ್ದೆ ತರಲಾಗಿದೆ ಎಂದು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಮಾಧುಸ್ವಾಮಿ, ನಮ್ಮ ಮುಖ ಚೆನ್ನಾಗಿದೆ, ನಾವು ಮುಖ ಉಳಿಸಿಕೊಳ್ಳಬೇಕಿಲ್ಲ.
ಧಾರ್ಮಿಕ ಕಟ್ಟಡಗಳ ಮುಖ ಉಳಿಸಬೇಕಿದೆ. ನಮ್ಮ ಮುಖ ಉಳಿಸಿಕೊಳ್ಳಬೇಕು ಎಂದಿದ್ದರೆ ಬರೀ ದೇವಸ್ಥಾನ ಸಂರಕ್ಷಣೆ ಅಂತಾ ಹೇಳುತ್ತಿದ್ದೆವು. ಆದರೆ, ಎಲ್ಲಾ ಧರ್ಮದ ಕಟ್ಟಡ ಸೇರಿಸಿದ್ದೇವೆ ಎಂದು ತಿರುಗೇಟು ನೀಡಿದರು.
ಯಾರದ್ದೋ ಒತ್ತಡಕ್ಕೆ ಮಣಿದು ಇದನ್ನ ಮಾಡುತ್ತಿಲ್ಲ, ಅಂತಹ ಸ್ಥಿತಿ ನಮಗೆ ಬಂದಿಲ್ಲ. ರಾಜ್ಯದಲ್ಲಿ ಅಶಾಂತಿ ಆಗಬಾರದು ಎನ್ನುವ ಕಾರಣಕ್ಕೆ ಈ ಬಿಲ್ ತಂದಿದ್ದೇವೆ. ಮುಂದೆ ಯಾವುದು ಉಳಿಸಬೇಕು ಎಂದು ಚರ್ಚಿಸಿ ನಿರ್ಧರಿಸಲಾಗುತ್ತದೆ. ಸದ್ಯ ಶಾಂತಿ ಕದಡಬಾರದು ಎನ್ನುವುದು ನಮ್ಮ ಉದ್ದೇಶ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದೆ.
ಅಂತಿಮ ಆದೇಶ ಆಗಿದ್ದರೆ ನಾವೇನು ಮಾಡಲು ಆಗುತ್ತಿರಲಿಲ್ಲ. ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮಾಡುತ್ತೇವೆ. ನಂತರ ಕೇಸ್ ಟು ಕೇಸ್ ಕುಳಿತು ಚರ್ಚಿಸಲಾಗುತ್ತದೆ. ಏನು ಮಾಡಬೇಕು, ಕಾನೂನು ತರಬೇಕಾ ಎಂಬುದರ ಬಗ್ಗೆ ನಂತರ ನಿರ್ಧರಿಸಲಾಗುತ್ತದೆ ಎಂದು ವಿವರಣೆ ನೀಡಿದರು.
'ಕೇವಲ ತಾತ್ಕಾಲಿಕ ಸಂಕ್ಷಣೆ ಮಾತ್ರ'
ಕಾಂಗ್ರೆಸ್ ಸದಸ್ಯ ಪಿ ಆರ್ ರಮೇಶ್, ನಿಮ್ಮ ಕಾಯ್ದೆಗೆ ಹೈಕೋರ್ಟ್ ತಡೆ ಕೊಟ್ಟರೆ ಏನು ಮಾಡುತ್ತೀರ ಎನ್ನುವ ಪ್ರಶ್ನೆಗೆ ಗರಂ ಆದ ಸಚಿವರು, ಕೋರ್ಟ್ ತಡೆ ಕೊಡಲಿದೆ ಎಂದು ನಾವು ಕೈಕಟ್ಟಿ ಕೂರಲು ಆಗುತ್ತದೆಯಾ? ನಾವು ಯಾವುದನ್ನೂ ಸಕ್ರಮ ಮಾಡಲ್ಲ. ಕೇವಲ ತಾತ್ಕಾಲಿಕ ಸಂಕ್ಷಣೆ ಮಾತ್ರ.
ನಂತರ ಕೇಸ್ ಬೈ ಕೇಸ್ ಪರಿಶೀಲಿಸುತ್ತೇವೆ. ಹೊಸ ನಿರ್ಮಾಣವನ್ನು ಎಲ್ಲೂ ಮಾಡಲ್ಲ. ಹಳೆಯದ್ದನ್ನು ಸಂರಕ್ಷಿಸಲು ವಿಧೇಯಕ ತಂದಿದ್ದೇವೆ. ಹಾಗಾಗಿ, ವಿಧೇಯಕಕ್ಕೆ ಅನುಮತಿ ಕೊಡಿ ಎಂದು ಸದನಕ್ಕೆ ಮನವಿ ಮಾಡಿದರು.
ವಿಸ್ತೃತ ಚರ್ಚೆಯ ನಂತರ ಎಲ್ಲ ಸದಸ್ಯರು ವಿಧೇಯಕಕ್ಕೆ ಸಹಮತ ವ್ಯಕ್ತಪಡಿಸಿದರು. ಅಂತಿಮವಾಗಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕಕ್ಕೆ ವಿಧಾನ ಪರಿಷತ್ ಧ್ವನಿಮತದ ಮೂಲಕ ಅಂಗೀಕಾರ ನೀಡಿತು.