ಕರ್ನಾಟಕದ ವಿಧಾನಸಭೆಗೆ ದೊಡ್ಡ ಇತಿಹಾಸವೇ ಇದೆ. ಸ್ವಾತಂತ್ರ್ಯ ಪೂರ್ವದಲ್ಲೇ ರಾಜ್ಯದಲ್ಲಿ ಪ್ರಜಾಪ್ರಭುತ್ವದ ರೀತಿಯ ಆಡಳಿತ ಸ್ಥಾಪನೆಯಾಗಿತ್ತು. ಮೈಸೂರು ರಾಜರು ಪ್ರಜಾಪ್ರತಿನಿಧಿ ಪರಿಷತ್ ಸ್ಥಾಪಿಸಿ ಉತ್ತಮ ಆಡಳಿತ ನೀಡಿದ್ದು ತಿಳಿದೇ ಇದೆ. ಜಗತ್ತಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟೊಂದು ಹಳೆಯದೋ ಕರ್ನಾಟಕದಲ್ಲೂ ಶಾಸಕಾಂಗ ವ್ಯವಸ್ಥೆಯೂ ಅಷ್ಟೇ ಹಳೆಯದು. ಇನ್ನೂ ವಿಶೇಷ ಎಂದರೆ ದೇಶದ ಮೊದಲು ಸಂಸತ್ ಎಂದು ಕರೆಯಬಹುದಾದ ಅನುಭವ ಮಂಟಪ 12ನೇ ಶತಮಾನದಲ್ಲಿ ಸ್ಥಾಪನೆಯಾಗಿತ್ತು. ಅದು ಕರ್ನಾಟಕದಲ್ಲಿ ಎಂಬುದು ನಾವೆಲ್ಲ ಹೆಮ್ಮೆ ಪಡುವ ವಿಚಾರ. ಹೀಗಾಗಿ, ಕರ್ನಾಟಕದ ಶಾಸನ ಸಭೆಯ ಹಿರಿಮೆ ಪ್ರಜಾಪ್ರಭುತ್ವದಷ್ಟೇ ಪವಿತ್ರವಾದುದು.
ಕರ್ನಾಟಕದ ಅಂದರೆ ಅಂದಿನ ಮೈಸೂರು ರಾಜ್ಯದ ಮೊಟ್ಟಮೊದಲ ವಿಧಾನಸಭೆ ಸಮಾವೇಶಗೊಂಡದ್ದು 1952ರ ಜೂನ್ 18ರ ಬೆಳಗ್ಗೆ 11 ಗಂಟೆಗೆ. ಹೀಗಾಗಿ, ಇತ್ತೀಚಿನವರೆಗೂ ವಿಧಾನಸಭೆ ಕಲಾಪ ಬೆಳಗ್ಗೆ 11 ಗಂಟೆಗೆ ಆರಂಭವಾಗುತ್ತಿತ್ತು. ಇತ್ತೀಚೆಗಷ್ಟೇ ಅದು 10.30ಕ್ಕೆ ಎಂದು ತಿದ್ದುಪಡಿಗೊಂಡಿತ್ತು. ಮೊಟ್ಟಮೊದಲ ವಿಧಾನಸಭೆ1952ರಲ್ಲಿ ನಡೆದದ್ದು ಇಂದಿನ ಕರ್ನಾಟಕ ಹೈಕೋರ್ಟ್ ಕಟ್ಟಡದಲ್ಲಿ. ಅಂದರೆ ಅಂದು ಅದನ್ನು ಪಬ್ಲಿಕ್ ಆಫೀಸ್ ಬಿಲ್ಡಿಂಗ್‌ನ ಕಾನ್ಫರೆನ್ಸ್ ಹಾಲ್ ಎಂದು ಗುರುತಿಸಲಾಗುತ್ತಿತ್ತು.
ತಾತ್ಕಾಲಿಕ ಶಾಸನಸಭೆ ರದ್ದು: 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರ ರಾಜರುಗಳ ಆಳ್ವಿಕೆ ಕೊನೆಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೊಳಿಸಲೆಂದೇ ಅಂದಿನ ಮೈಸೂರು ಅರಸರು 1949ರ ಡಿಸೆಂಬರ್ 16ರಂದು ತಾತ್ಕಾಲಿಕ ಶಾಸನಸಭೆಯನ್ನು ರದ್ದುಪಡಿಸಿದ್ದರು. ಅದಾದ ಬಳಿಕ 1952ರಲ್ಲಿ ಮೈಸೂರು ರಾಜ್ಯದಲ್ಲಿ ಮೊದಲ ಚುನಾವಣೆ ನಡೆಸಲಾಯಿತು.
ಮೊಟ್ಟಮೊದಲ ಚುನಾವಣೆಯಲ್ಲಿ 99 ಚುನಾಯಿತ ಸದಸ್ಯರು ಹಾಗೂ ಒಬ್ಬರು ನಾಮನಿರ್ದೇಶಿತ ಸದಸ್ಯರ ಆಯ್ಕೆ ಮಾಡಲಾಗಿತ್ತು. ಮೊದಲ ವಿಧಾನಸಭೆಯ ಗೌರವ ಸ್ಪೀಕರ್ ಆಗಿ ವಿ.ವೆಂಕಟಪ್ಪ ಕಾರ್ಯನಿರ್ವಹಿಸಿದರೆ, ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಸೇರಿದಂತೆ ಎಲ್ಲ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದ್ದರು. ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದು ಸೋಷಲಿಸ್ಟ್ ಪಕ್ಷದ ಮುಖಂಡ ಶಾಂತವೇರಿ ಗೋಪಾಲಗೌಡರ ವಿರುದ್ಧ ಎಚ್.ಸಿದ್ದಯ್ಯ ಅವರು 74 ಮತಗಳನ್ನು ಪಡೆದು ಆಯ್ಕೆಯಾದರು. ಆಗ ಮೊದಲ ಮುಖ್ಯಮಂತ್ರಿ ಆಗಿ ಕೆಂಗಲ್ ಹನುಮಂತಯ್ಯ ಭಾಷಣ ಮಾಡಿದರು.
ವಿಧಾನಸೌಧದಲ್ಲಿ ಮೊದಲ ವಿಧಾನಸಭೆ ಅಧಿವೇಶನ: ಬಳಿಕ 1953ರಲ್ಲಿ ಆಂಧ್ರ ರಾಜ್ಯ ರಚನೆಯಾದ ಬಳಿಕ ಮದ್ರಾಸ್ ರಾಜ್ಯದಿಂದ ಬಳ್ಳಾರಿ ಜಿಲ್ಲೆ ಸಹ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಯಿತು. ಆಗ ವಿಧಾನಸಭೆ ಸದಸ್ಯರ ಸಂಖ್ಯೆಯನ್ನು ಐದು ಸ್ಥಾನ ಹೆಚ್ಚಿಸುವ ಮೂಲಕ 104ಕ್ಕೆ ಏರಿಸಲಾಯಿತು. 1956ರ ನವೆಂಬರ್ 1ರಂದು ರಾಜ್ಯ ಪುನರ್ ರಚನೆ ಆಯಿತು.
ಆ ಬಳಿಕ ಮುಂಬೈ ಪ್ರಾಂತ್ಯದಲ್ಲಿದ್ದ ನಾಲ್ಕು ಜಿಲ್ಲೆಗಳು ಮೈಸೂರು ರಾಜ್ಯವನ್ನು ಸೇರಿದವು. ಅಷ್ಟೇ ಅಲ್ಲ ಇದೇ ವೇಳೆ, ಹೈದರಾಬಾದ್ ಸಂಸ್ಥಾನದಲ್ಲಿದ್ದ ಮೂರು ಜಿಲ್ಲೆಗಳು, ಹಳೆ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿದ್ದ ಮೈಸೂರು ಮತ್ತು ಕೊಡಗಿನ ಒಂದು ಜಿಲ್ಲೆ ಹಾಗೂ ಒಂದು ತಾಲೂಕು ಕರ್ನಾಟಕ ಅಂದರೆ, ಮೈಸೂರು ರಾಜ್ಯವನ್ನು ಸೇರ್ಪಡೆಗೊಂಡವು. 1956ರ ಡಿಸೆಂಬರ್ 19ರಂದು ನೂತನವಾಗಿ ನಿರ್ಮಿಸಲಾದ ವಿಧಾನಸೌಧದಲ್ಲಿ ಮೊದಲ ವಿಧಾನಸಭೆ ಅಧಿವೇಶನ ನಡೆಯಿತು.
1957 ರಲ್ಲಿ 208, 1979ರಲ್ಲಿ 224ಕ್ಕೇರಿಕೆ: 1957ರಲ್ಲಿ ವಿಧಾನಸಭೆ ಸದಸ್ಯರ ಸಂಖ್ಯೆ 208 ಕ್ಕೆ ಹೆಚ್ಚಿಸಲಾಯಿತು. 1967ರಲ್ಲಿ 216ಕ್ಕೆ ಏರಿಕೆಯಾಯಿತು.ಬಳಿಕ 1973ರಲ್ಲಿ ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಗಿ ಪುನರ್ ನಾಮಕರಣಗೊಂಡಿತು. 1979ರಲ್ಲಿ ಸದನದ ಸದಸ್ಯರ ಸಂಖ್ಯೆ 224ಕ್ಕೆ ಏರಿಕೆ ಮಾಡಲಾಯಿತು. ಆಗ ನಾಮನಿರ್ದೇಶಿತ ಸದಸ್ಯರೊಬ್ಬರನ್ನು ಒಳಗೊಂಡು ವಿಧಾನಸಭೆಯ ಬಲ 225 ಆಯಿತು.
1952 ರಿಂದ 2005ರವರೆಗೆ ಕೇವಲ ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿದ್ದ ವಿಧಾನಮಂಡಲ ಅಧಿವೇಶನ 2006ರ ಸೆಪ್ಟೆಂಬರ್ 25ರಿಂದ 29ರವರೆಗೆ ಬೆಳಗಾವಿಯಲ್ಲಿ ನಡೆಯಿತು. ನಂತರ 2009ರ ನಂತರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರತಿವರ್ಷ ಅಧಿವೇಶನ ನಡೆಯುವ ಸಂಪ್ರದಾಯ ಬೆಳೆದು ಬಂದಿದೆ.
ಪ್ರಜಾಪ್ರಭುತ್ವದ ಇತಿಹಾಸ: ಒಡೆಯರ್ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನವು ಪ್ರಗತಿಪರ ರಾಜ್ಯ ಎಂಬ ಹೆಸರನ್ನು ಗಳಿಸುವ ಮೂಲಕ ವಿಶ್ವಾದ್ಯಂತ ಪಸಿದ್ಧವಾಗಿತ್ತು. ಈ ಮೂಲಕ ಮೈಸೂರು ರಾಜರು ಪ್ರಜಾಪ್ರಭುತ್ವದ ಆಡಳಿತಕ್ಕೆ ಮುನ್ನುಡಿ ಬರೆದಿದ್ದರು.
19 ನೇ ಶತಮಾನದ ಎಂಬತ್ತರ ದಶಕದಲ್ಲಿ ಪ್ರಾಥಮಿಕ ರೂಪದಲ್ಲಿ ರಾಜ್ಯದ ಆಡಳಿತದೊಂದಿಗೆ ಜನಪ್ರತಿನಿಧಿಗಳ ಸಭೆಯನ್ನು ಆರಂಭಿಸಲಾಯಿತು. ಮಾರ್ಚ್ 1881 ರಲ್ಲಿ ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರ್ ಅವರು ಮೈಸೂರು ಸಂಸ್ಥಾನದ ಅಧಿಕಾರ ವಹಿಸಿಕೊಂಡರು. ಅದೇ ವರ್ಷ ಮೈಸೂರು ಪ್ರತಿನಿಧಿ ಸಭೆ ಉದ್ಘಾಟನೆಯಾಯಿತು.
1879 ರಲ್ಲಿ ಮೈಸೂರಿನ ಮುಖ್ಯ ಕಮಿಷನರ್ ಶ್ರೀ. ಜೆ.ಡಿ. ಗಾರ್ಡನ್ ಮೈಸೂರು ರಾಜರಿಗೆ ಅಧಿಕಾರ ಹಸ್ತಾಂತರ ಮಾಡುವ ಮುನ್ನ ಪ್ರಜಾಪ್ರತಿನಿಧಿ ಸಭೆ ಸ್ಥಾಪಿಸುವ ರಾಜರ ಪ್ರಸ್ತಾವ ಆಗಿನ ಬ್ರಿಟಿಷ್ ಆಡಳಿತಕ್ಕೆ ಸಹ್ಯವಾಗಿರಲಿಲ್ಲ. ಆದಾಗ್ಯೂ, 1881 ರ ಆಗಸ್ಟ್ 25 ರಂದು ಮಹಾರಾಜರು ಅಸೆಂಬ್ಲಿ ಸ್ಥಾಪಿಸುವ ಸಾಂವಿಧಾನಿಕ ಆದೇಶ ಹೊರಡಿಸಲಾಯಿತು.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 31 ಜುಲೈ 2019 ರಿಂದ ಕರ್ನಾಟಕ ವಿಧಾನಸಭೆಯ 23ನೇ ಸ್ಪೀಕರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತದಲ್ಲಿದೆ. ಸೌದತ್ತಿಯಿಂದ ಮೂರನೇ ಬಾರಿಗೆ ಶಾಸಕರಾಗಿರುವ ಆನಂದ್ ಮಾಮನಿ ಕರ್ನಾಟಕ ವಿಧಾನಸಭೆಯ ಉಪ ಸಭಾಪತಿಯಾಗಿದ್ದಾರೆ.
ಇದನ್ನೂ ಓದಿ: Video: ನಾಗರಹಾವು - ನಾಯಿ ನಡುವೆ ಘೋರ ಕಾದಾಟ: ಕೊನೆಗೆ ಪ್ರಾಣ ಬಿಟ್ಟ ಎರಡೂ ಜೀವಗಳು