ಆನೇಕಲ್: ಕೃಷಿ-ರೈತ ಮತ್ತು ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಅತ್ತಿಬೆಲೆ ಗಡಿಯನ್ನು ಬಂದ್ ಮಾಡಲು ಯತ್ನಿಸಿದವು. ಕೂಡಲೇ ಎಚ್ಚೆತ್ತ ಆನೇಕಲ್ ಉಪವಿಭಾಗದ ಪೊಲೀಸರು, ಹೋರಾಟಗಾರರನ್ನು ವಶಕ್ಕೆ ಪಡೆದರು.
ಅತ್ತಿಬೆಲೆ ವೃತ್ತದಿಂದ ಕನ್ನಡ-ತಮಿಳು ಗಡಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ಹೋರಾಟಗಾರರು, ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಹೋರಾಟದ ನೇತೃತ್ವ ವಹಿಸಿದ್ದ ಕನ್ನಡ ವಾಟಾಳ್ ಪಕ್ಷದ ಸ್ಥಾಪಕ ವಾಟಾಳ್ ನಾಗರಾಜ್ ಮಾತನಾಡಿ, ಅಧಿಕಾರ ಹೊಂದುವಲ್ಲಿ ಸಿಎಂ ಯಡಿಯೂರಪ್ಪ ಹಸಿರು ಶಾಲು ಹೊದ್ದು ರೈತರ ಮೇಲೆ ಪ್ರಮಾಣ ಮಾಡಿ ರೈತರ ಹಿತಕ್ಕಾಗಿ ಅಧಿಕಾರಕ್ಕೆ ಬಂದಿದ್ದೇನೆ ಎಂದಿದ್ದರು. ಆದರೆ ಇಂದೇನಾಗಿದೆ. ರೈತರನ್ನು ಕೊಚ್ಚೆಯಲ್ಲಿ ಹಾಕಿ ತುಳಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೊತೆಗೆ ಈಗ ಕೊರೊನಾ ಸಂಕಷ್ಟಕಾಲ. ಕೇಂದ್ರ ಸಚಿವರು, ಸಂಸದರು, ಶಾಸಕರು ಸಾವನ್ನಪ್ಪಿದರೂ ಕೋವಿಡ್ ಸಾವಿನ ಸಂಖ್ಯೆ ತಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಹೀಗಾಗಿ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಮುಂದಿನ 28ರಂದು ಕರೆ ನೀಡಿರುವ ಬಂದ್ಗೆ ಸಂಪೂರ್ಣ ಬೆಂಬಲವಾಗಿ ಕನ್ನಡಪರ ಸಂಘಟನೆಗಳು ಬೇಷರತ್ ಬೆಂಬಲ ನೀಡಲಿದ್ದೇವೆಂದು ಘೋಷಿಸಿದರು.