ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ದಂಧೆಯ ಬಗ್ಗೆ ಅಧಿಕಾರಿಗಳಿಗೆ ಕೆಲ ಮಾಹಿತಿ ನೀಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಎರಡನೇ ಬಾರಿಗೆ ಸಿಸಿಬಿ ಮುಂದೆ ಹಾಜರಾಗಿದ್ದಾರೆ.
ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ಸದ್ಯ ಹಿರಿಯ ಅಧಿಕಾರಿ ರವಿ ಎದುರು ಇಂದ್ರಜಿತ್ ಹಾಜರಾಗಿ ಎರಡನೇ ಸುತ್ತಿನ ವಿಚಾರಣೆಗೆ ಒಳಗಾಗಲಿದ್ದಾರೆ. ಎರಡನೇ ವಿಚಾರಣೆ ವೇಳೆ ಇನ್ನಷ್ಟು ಸೆಲೆಬ್ರಿಟಿಗಳ ಮುಖವಾಡ ಬಯಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂದು ಪ್ರಮುಖ ಸಾಕ್ಷ್ಯಾಧಾರಗಳನ್ನು ಸಿಸಿಬಿಗೆ ನೀಡಲು ನೋಟಿಸ್ ನೀಡಲಾಗಿತ್ತು. ಮತ್ತೊಂದೆಡೆ ಡ್ರಗ್ಸ್ ಜಾಲ ಭೇದಿಸುತ್ತಿರುವ ಸಿಸಿಬಿ ಅಧಿಕಾರಿಗಳು ಸುಮಾರು 20 ಜನರನ್ನ ಒಳಗೊಂಡಂತೆ ಮೀಟಿಂಗ್ ನಡೆಸುತ್ತಿದ್ದಾರೆ. ಸಿಸಿಬಿ ಮುಖ್ಯ ಕಚೇರಿಯಲ್ಲಿ ಮೀಟಿಂಗ್ ನಡೆಯುತ್ತಿದ್ದು, ಸಿಸಿಬಿ ಜಂಟಿ ಆಯುಕ್ತ, ಸಿಸಿಬಿ ಡಿಸಿಪಿ, ಎಸಿಪಿಗಳು, ಇನ್ಸ್ಪೆಕ್ಟರ್ ಭಾಗಿಯಾಗಿದ್ದಾರೆ.
ಸಭೆಯಲ್ಲಿ ಯಾವ ಯಾವ ನಟ ನಟಿಯರಿಗೆ ನೋಟಿಸ್ ಕೊಡಬೇಕು ಎಂಬ ವಿಷಯದ ಕುರಿತು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮೀಟಿಂಗ್ನಲ್ಲಿ ಟೀಂ ವಿಂಗಡಣೆ ಮಾಡಿ ಕಾರ್ಯನಿರ್ವಹಿಸಲು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.