ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆ ನಾವು ಬಿಜೆಪಿ ಜನೋತ್ಸವ ಸಮಾರಂಭವನ್ನು ರದ್ದು ಮಾಡಿದ್ದೇವೆ. ಪ್ರಸಂಗ ಬಂದರೆ ರಾಜ್ಯದಲ್ಲೂ ಯೋಗಿ ಆದಿತ್ಯನಾಥ್ ಮಾಡೆಲ್ಅನ್ನು ಜಾರಿಗೆ ತರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿಡಿಗೇಡಿಗಳಿಗೆ ಖಡಕ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಮೂರು ವರ್ಷ ಪೂರೈಸಿದ ಹಿನ್ನೆಲೆ ವಿಧಾನಸೌಧದಲ್ಲಿ ಸಚಿವರ ಜೊತೆಗೂಡಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯೋಗಿ ಮಾಡೆಲ್ ತರಬೇಕೆಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿದರು. ಉತ್ತರ ಪ್ರದೇಶ ರಾಜ್ಯದ ಸ್ಥಿತಿಗೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಿ ಇದ್ದಾರೆ. ಪ್ರಸಂಗ ಬಂದರೆ ಯೋಗಿ ಮಾಡೆಲ್ ಕರ್ನಾಟಕದಲ್ಲೂ ಬರಲಿದೆ ಎಂದು ತಿಳಿಸಿದರು.
ನಮ್ಮ ಮುಂದೆ ಕೆಲ ಸವಾಲುಗಳು ಇವೆ. ಕೋಮು ಗಲಭೆ ಹತ್ತಿಕ್ಕುವ ಸವಾಲು ಇದೆ. ರಾಜ್ಯದಲ್ಲಿ ಕಳೆದ 10 ವರ್ಷದಲ್ಲಿ ಈ ಶಕ್ತಿಗಳು ತಲೆ ಎತ್ತಿವೆ. ಪೊಲೀಸರು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಐದು ಟೀಂ ಮಾಡಿ ಕೇರಳಕ್ಕೆ ಕಳುಹಿಸಲಾಗುತ್ತಿದೆ. ಹರ್ಷನ ಕೊಲೆಯಲ್ಲಿ ಯಾವ ರೀತಿ ಆದಷ್ಟು ಬೇಗ ಆರೋಪಿಗಳ ಬಂಧನ ಆಗಿತ್ತೋ.. ಅದೇ ರೀತಿ ಪ್ರವೀಣ್ ಪ್ರಕರಣದಲ್ಲೂ ಆಗಲಿದೆ. ಕೇವಲ ಮಾತಾಗಿ ಉಳಿಯಲ್ಲ, ನಾವು ಮಾಡಿ ತೋರಿಸುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಯಾವುದೇ ರಾಜಿ ಮಾಡುವುದಿಲ್ಲ ಎಂದು ತಿಳಿಸಿದರು.
ಪಿಎಫ್ಐ ಬ್ಯಾನ್ ಬಗ್ಗೆ ಶೀಘ್ರ ಕೇಂದ್ರದಿಂದ ತೀರ್ಮಾನ: ಪಿಎಫ್ಐ, ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸುವ ಹಕ್ಕು ಕೇಂದ್ರ ಸರ್ಕಾರಕ್ಕೆ ಇದೆ. ಇತರೆ ರಾಜ್ಯಗಳಲ್ಲಿ ಬ್ಯಾನ್ ಆದರೂ ಹೈಕೋರ್ಟ್ ಸ್ಟೇ ತಂದಿದೆ. ಈ ಬಗ್ಗೆ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದೇವೆ. ಇದರ ಪ್ರಕ್ರಿಯೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಆದಷ್ಟು ಬೇಗ ತೀರ್ಮಾನ ಹೊರಬೀಳಲಿದೆ. ದೇಶಾದ್ಯಂತ ಸಂಘಟನೆ ನಿಷೇಧ ಆಗಬೇಕಾಗಿದೆ. ಎಲ್ಲಾ ರಾಜ್ಯಗಳಿಂದ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಮಗ್ರ ಅಭಿವೃದ್ಧಿಯ ಆಡಳಿತ ನೀಡಿದ್ದೇವೆ: ಜನೋತ್ಸವ ಕಾರ್ಯಕ್ರಮ ನಡೆಯಬೇಕಾಗಿತ್ತು. ಅದನ್ನು ರದ್ದು ಪಡಿಸಲಾಗಿದೆ. ನಮ್ಮ ಕಾರ್ಯಕರ್ತ ಪ್ರವೀಣ್ ಹತ್ಯೆ ಬಳಿಕ ಜನರ ಆಕ್ರೋಶ ಹಿನ್ನೆಲೆ ರದ್ದು ಮಾಡಿದ್ದೇವೆ. ನಿನ್ನೆ ನಡೆದ ಘಟನೆ ಹಿನ್ನೆಲೆ ರಾತ್ರಿ ಇಡೀ ಯೋಚನೆ ಮಾಡಿದ್ದೇನೆ. ಆತ್ಮಸಾಕ್ಷಿ ಮೇರೆಗೆ ನಾನು ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಆದರೂ ಸರ್ಕಾರದ ಕಲ್ಯಾಣ ಕಾರ್ಯಕ್ರಮವನ್ನು ಹೇಳುವ ಅಗತ್ಯ ಇದೆ. ನಮ್ಮದೊಂದು ಟೀಂ ವರ್ಕ್ ಆಗಿದೆ. ಸಚಿವ ಸಂಪುಟದಲ್ಲಿ ಸೇವಾ ಮನೋಭಾವನೆ ಇರುವವರು ಇದ್ದಾರೆ, ಅನುಭವಿಗಳಿದ್ದಾರೆ, ಉತ್ಸಾಹಿಗಳಿದ್ದಾರೆ. ಎಲ್ಲರಿಗೂ ಬದ್ಧತೆ ಇದೆ ಎಂದರು.
ಕೋವಿಡ್ ನಿಯಂತ್ರಣ ಹಂತದಲ್ಲಿದ್ದ ಸಂದರ್ಭ ನಾನು ಅಧಿಕಾರ ಸ್ವೀಕರಿಸಿದೆ. ಆಡಳಿತ ಯಾರ ಪರವಾಗಿದೆ ಎಂಬುದು ಬಹಳ ಮುಖ್ಯ. ಜನ ಪರವಾದ ಆಡಳಿತ, ರಾಜ್ಯದ ಜನರು ಪಾಲ್ಗೊಳ್ಳುವಂತ ಆಡಳಿತ ನೀಡಿದ್ದೇವೆ. 10 ಲಕ್ಷ ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ಯೋಜನೆ ತಲುಪಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಯನ್ನೂ ಹೆಚ್ಚಿಗೆ ಮಾಡಿದ್ದೇವೆ. ಎಸ್ಸಿ/ಎಸ್ಟಿ ಸಮುದಾಯಕ್ಕೂ ಕೆಲ ನಿರ್ಣಯ ಮಾಡಿದ್ದೇವೆ.ಎಸ್ಸಿ/ಎಸ್ಟಿ, ಒಬಿಸಿ ಸಮುದಾಯಗಳಿಗೆ 800 ಕೋಟಿ ರೂ. ಹೆಚ್ಚುವರಿ ಹಣ ಕೊಟ್ಟಿದ್ದೇವೆ. ಎಸ್ಸಿ/ಎಸ್ಟಿ ಸಮುದಾಯದವರಿಗೆ 75 ಯುನಿಟ್ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಐದು ಲಕ್ಷ ಸ್ತ್ರೀಯರಿಗೆ ಸ್ವಯಂ ಉದ್ಯೋಗ ನೀಡಲು ಮುಂದಾಗಿದ್ದೇವೆ. ಎನ್‌ಇಪಿ ಜಾರಿಗೆ ತರುವ ಮೊದಲ ರಾಜ್ಯ ನಮ್ಮದಾಗಿದೆ. 750 PHC ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದೇವೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ನಂ. 1 ಇದೆ. ಸುಮಾರು 1.15 ಲಕ್ಷ ಎಂಒಇಗಳಿಗೆ ಸಹಿ ಹಾಕಲಾಗಿದೆ. ಅತಿ ಹೆಚ್ಚು ಬಂಡವಾಳ ಹೂಡಿಕೆ ಪ್ರಸ್ತಾವನೆ ಬಂದಿದೆ. ಹೊಸ ಉದ್ಯೋಗ ನೀತಿ ತರುತ್ತಿದ್ದೇವೆ. 3,000 ಕೋಟಿ ರೂ.ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ನೀಡಿದ್ದೇವೆ. 5 ಲಕ್ಷ ಬಸವ ವಸತಿ ಯೋಜನೆಯಡಿ ಮನೆ ಕಟ್ಟಲು ಮಂಜೂರಾತಿ ಆಗಿದೆ ಎಂದು ಸಿಎಂ ವಿವರಿಸಿದರು.
ಯೋಜನಾ ಬದ್ಧ ಅಭಿವೃದ್ಧಿಗೆ ಗಮನಕೊಟ್ಡಿದ್ದೇವೆ. ಬೆಂಗಳೂರು ಅಭಿವೃದ್ಧಿಗೆ 6000 ಕೋಟಿ ನಗರೋತ್ಥಾನಕ್ಕಾಗಿ ಕೊಟ್ಟಿದ್ದೇವೆ. ಬೆಂಗಳೂರು ಉಪನಗರ ರೈಲು ಯೋಜನೆಗೆ ಶಂಕು ಸ್ಥಾಪನೆ ಆಗಿದೆ. ಬೆಂಗಳೂರಲ್ಲಿ ಪಿಆರ್ ಆರ್ ಗೂ ಟೆಂಡರ್ ಕರೆದಿದ್ದೇವೆ. ಸಮಸ್ಯೆ ಎಲ್ಲಿದೆ ಅಲ್ಲಿ ಜನರಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. 8,000 ಹೊಸ ಶಾಲಾ ಕೊಠಡಿ ನಿರ್ಮಾಣ ಮಾಡುತ್ತಿದ್ದೇವೆ. 100 PHC ಯನ್ನು CHCಗೆ ಅಪ್ ಗ್ರೇಡ್ ಮಾಡಲು ನಿರ್ಧರಿಸಿದ್ದೇವೆ. ಯುವಕರಿಗಾಗಿ ವಿಶೇಷ ಯೋಜನೆ ಮಾಡುತ್ತಿದ್ದೇವೆ ಎಂದರು.
ಪುಣ್ಯ ಕೋಟಿ ಕಾರ್ಯಕ್ರಮ ಜಾರಿಯಾಗಲಿದೆ. ಹಸು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ಮಾಡಿದ್ದೇವೆ. ಇಂದಿನಿಂದ ಜಾರಿಯಾಗಲಿದೆ. ಅದಕ್ಲಾಗಿ 11 ಸಾವಿರ ನಿರ್ವಹಣಾ ವೆಚ್ಚ ನೀಡಲಾಗುತ್ತದೆ. ನೇಕಾರರ ಮಕ್ಕಳಿಗೆ, ಟ್ಯಾಕ್ಸಿ ಚಾಲಕ ಮಕ್ಕಳಿಗೆ, ಮೀನುಗಾರರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ಕೊಡುತ್ತೇವೆ. ದುಡಿಯುವ ವರ್ಗ, ಒಬಿಸಿ, ಬಡ ವರ್ಗ ಎಲ್ಲರಿಗೂ ನಮ್ಮ ಸರ್ಕಾರ ಅನುಕೂಲ ಮಾಡಿದೆ. ಎಲ್ಲಾ ಮಠಗಳಿಗೂ ಸರ್ಕಾರ ಸಹಾಯ ಮಾಡಿದ್ದೇವೆ. ಪ್ರಗತಿಪರ ವಾದ, ರೈತರಿಗೆ, ಯುವಕರಿಗೆ, ಕೂಲಿ ಕಾರ್ಮಿಕರಿಗೆ ಸಮಗ್ರ ಯೋಜನೆ ಮಾಡಿ ಅದರ ಲಾಭ ಸಿಗುವಂತೆ ಮಾಡಿದ್ದೇವೆ. ಸರ್ವರೂ ವಿಕಾಸ ಆಗುವಂಥ ಸಮಗ್ರ ಅಭಿವೃದ್ಧಿಯ ಆಡಳಿತ ನಡೆಸುತ್ತಿದ್ದೇವೆ. ಮುಂದೆ ದೊಡ್ಡ ಪ್ರಮಾಣದಲ್ಲಿ ರಾಜ್ಯದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಕೊಟ್ಟಿದ್ದು ದೌರ್ಭಾಗ್ಯ: ಕಾಂಗ್ರೆಸ್ ಸರ್ಕಾರ ಯಾವುದೇ ಭಾಗ್ಯ ಕೊಟ್ಟಿಲ್ಲ. ಅವರು ಕೊಟ್ಟಿದ್ದು ಬರೀ ದೌರ್ಬಾಗ್ಯ. ನಮ್ಮ ಸರ್ಕಾರಕ್ಕೆ ಸಿದ್ದರಾಮಯ್ಯ 10ರಲ್ಲಿ ಜೀರೋ ಕೊಡುತ್ತಾರೆ. ಆದರೆ ನಾವು ಅದರ ಹಿಂದೆ 10 ಸೇರಿಸಿ, 100 ಅಂಕ ಕೊಡುತ್ತೇವೆ ಎಂದರು.
ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುತ್ತೇನೆ: ಸಂಪುಟ ವಿಸ್ತರಣೆ ಸಂಬಂಧ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ರಾಜಕೀಯ ಪಕ್ಷವಾಗಿ ಒಂದು ನಿರ್ಣಯ ತೆಗೆದುಕೊಳ್ಳಬೇಕಾಗಿದೆ. ಜೆ.ಪಿ.ನಡ್ಡಾ ಇಲ್ಲಿಗೆ ಬಂದಿದ್ರೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುತ್ತಿದ್ದೆ. ಮುಂದಿನ ಬಾರಿ ಬಂದಾಗ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.