ಬೆಂಗಳೂರು: ಮುಂದಿನ ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನಾನು ಎಲ್ಲೂ ಓಡಿ ಹೋಗುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಆ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಗೊಂದಲಕ್ಕೆ ತೆರೆ ಎಳೆದರು.
ನೀವು ಮುಂದಿನ ಚುನಾವಣೆಯಲ್ಲಿ ನಿಲ್ಲುತ್ತೀರೋ ಇಲ್ಲವೋ ಎಂಬ ಗೊಂದಲ ಇದೆಯಲ್ಲ ಎಂಬ ಸ್ಪೀಕರ್ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಈ ವೇಳೆ ಎಲ್ಲಿ ನಿಲ್ಲುತ್ತೀರಾ ಎಂದು ಪ್ರಶ್ನಿಸಿದ ಆರ್. ಅಶೋಕ್ಗೆ ಪದ್ಮನಾಭ ನಗರದಲ್ಲಿ ನಿಲ್ಲುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ನಾನು ಈಗ ಬಾದಾಮಿಯನ್ನು ಪ್ರತಿನಿಧಿಸುತ್ತಿದ್ದೇನೆ, ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ ಎಂದರು.
ರಾಜಕಾರಣ ನಿಂತ ನೀರಲ್ಲ, ಬದಲಾವಣೆ ಆಗುತ್ತಾ ಇರುತ್ತದೆ. ಇಂದು ಇದ್ದವರು ನಾಳೆ ಇರುವುದಿಲ್ಲ. ಯಾರೂ ಕೂಡ ಶಾಶ್ವತವಾಗಿ ಇರುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಜನರ ಮೇಲೆ ವಿಶ್ವಾಸ ಇಲ್ಲದವರು ನಾವು ಇಲ್ಲೇ ಇರುತ್ತೇವೆ ಅಂತ ಹೇಳುತ್ತಾರೆ ಎಂದರು.