ಬೆಂಗಳೂರು: ಈರುಳ್ಳಿ ಬೆಲೆ ಗಗನಕ್ಕೇರಿದ ಪರಿಣಾಮ ಹೊಟೇಲ್ಗಳ ತಿಂಡಿ ಬೆಲೆಯು ಏರಲಿದೆ ಅಂದುಕೊಂಡಿದ್ದದ್ದರೆ ನಿಮ್ಮ ಊಹೆ ತಪ್ಪಾಗುತ್ತದೆ.
ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರು 'ಈಟಿವಿ ಭಾರತ' ಜೊತೆ ಮಾತನಾಡಿ, ಈರುಳ್ಳಿ ಬೆಲೆ ಏರಿಕೆಯಿಂದ ಹೊಟೇಲ್ ತಿಂಡಿ ಬೆಲೆಯೇರಿಕೆ ಆಗುವುದಿಲ್ಲ. ಪ್ರತಿ ವರ್ಷ ನವೆಂಬರ್ ತಿಂಗಳಿಂದ ಜನವರಿ ತಿಂಗಳವರೆಗೂ ಈರುಳ್ಳಿ ಬೆಲೆ ಏರುವುದು ಸಹಜ. ಬಡಿಸುವ ಪ್ರಮಾಣ ಕಡಿಮೆಯಾಗಬಹುದೇ ಹೊರತು ಬೆಲೆ ಏರಿಸುವ ಚಿಂತೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಎಲ್ಲಾ ಪದಾರ್ಥಗಳಿಗೆ ಈರುಳ್ಳಿ ಅತ್ಯಗತ್ಯ. ಸಣ್ಣ ಹೋಟೆಲ್ಗಳಲ್ಲಿ ಈರುಳ್ಳಿ ದೋಸೆ ಹಾಗೂ ಈರುಳ್ಳಿ ಪಕೋಡ ಸಿಗುವುದು ಕಷ್ಟವಾಗಿರುತ್ತದೆ. ಇದನ್ನು ಹೊರತುಪಡಿಸಿದರೆ ಸಾಮಾನ್ಯ ಹಾಗೂ ದೊಡ್ಡ ಹೋಟೆಲ್ಗಳಲ್ಲಿ ಈ ತಿಂಡಿಗಳು ಲಭ್ಯ ಇರಲಿದೆ. ಮನೆಗಳಲ್ಲಿ ಕ್ಷೀಣಿಸಿದಂತೆ ಹೋಟೆಲ್ಗಳಲ್ಲೂ ಬಳಕೆ ಅನುಗುಣವಾಗಿ ಕಡಿಮೆಯಾಗಿದೆ ಎಂದರು.
ಮೊದಲು ಬೆಂಗಳೂರಿಗೆ ಪ್ರತಿದಿನ 1,10,000 ಈರುಳ್ಳಿ ಮೂಟೆ ಬರುತ್ತಿತ್ತು. ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿಯ ಪರಿಣಾಮ ಕೇವಲ 48 ಸಾವಿರದಿಂದ 50 ಸಾವಿರ ಈರುಳ್ಳಿ ಮೂಟೆಗಳು ಮಾರುಕಟ್ಟೆಗೆ ಬರುತ್ತಿವೆ. ಈ ಕಾರಣದಿಂದ ಬಳಕೆ ಪ್ರಮಾಣ ಕ್ಷೀಣಿಸಿದೆ ಎಂದು ವಿವರಿಸಿದರು.
ಜನವರಿ ಅಥವಾ ಫೆಬ್ರುವರಿ ತಿಂಗಳಲ್ಲಿ ಈರುಳ್ಳಿ ಬೆಲೆ ಇಳಿಕೆ ಆಗದಿದ್ದರೆ ಹೋಟೆಲ್ ತಿಂಡಿ ಪದಾರ್ಥಗಳ ಬೆಲೆ ಏರುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಎರಡು ವರ್ಷಗಳಿಂದ ಪದಾರ್ಥಗಳ ಬೆಲೆ ಏರಿಕೆಯಾಗಿದ್ದರೂ ಹೊಟೇಲ್ಗಳು ತಿಂಡಿ ಬೆಲೆ ಏರಿಸಿರಲಿಲ್ಲ. ಏಪ್ರಿಲ್ ತಿಂಗಳಲ್ಲಿ ಹೋಟೆಲ್ ತಿನಿಸು ಬೆಲೆ ಏರಿಕೆ ಆಗಬಹುದು ಎಂದು ಸುಳಿವು ನೀಡಿದರು.