ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ ಜೋರಾಗಿದ್ದು, ಅಲ್ಲಲ್ಲಿ ಗುಡ್ಡ ಮತ್ತು ಭೂಕುಸಿತ ಉಂಟಾಗಿದೆ. ಇದರಿಂದ ರಸ್ತೆ ಸಂಚಾರ ಮತ್ತು ರೈಲ್ವೆ ಸಂಚಾರಕ್ಕೂ ಭಾರಿ ಅಡಚಣೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ, ಬೆಂಗಳೂರುನಿಂದ ಮಂಗಳೂರು ರೈಲ್ವೆ ಸಂಚಾರ ಸೇವೆ ರದ್ದಾಗಿದೆ. ಕಾರವಾರದಿಂದ ಯಶವಂತಪುರ ಗಾಡಿ ಸಂಖ್ಯೆ 16516ರ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. ಇನ್ನು ಮಂಗಳೂರಿನ ಸಿರಿವಾಗಿಲು ಬಳಿ ಗುಡ್ಡ ಕುಸಿತ ಉಂಟಾದ ಪರಿಣಾಮ ಇಂದು ಬೆಳಗ್ಗೆಯಿಂದಲೇ ಮಂಗಳೂರು- ಹಾಸನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಅಷ್ಟೇ ಅಲ್ಲದೇ, ಯಶವಂತಪುರದಿಂದ ಮಂಗಳೂರಿಗೆ ಇಂದು ತೆರಳಬೇಕಾದ ರೈಲು ಗಾಡಿ ಸಂಖ್ಯೆ 16575 ಅನ್ನು ರದ್ದು ಮಾಡಲಾಗಿದೆ. ಬೆಂಗಳೂರಿನಿಂದ ಹಾಸನಕ್ಕೆ ರೈಲ್ವೆ ಸೇವೆ ಇದ್ದು, ಹಾಸನದಿಂದ ಮಂಗಳೂರಿಗೆ ರೈಲು ಸೇವೆ ಸ್ಥಗಿತವಾಗಿದೆ.
ಇನ್ನು ಗುಡ್ಡ ಕುಸಿತವಾದ ಪ್ರದೇಶಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ಸೇವೆ ಮುಂದುವರಿಸುವುದಾಗಿ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.