ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಯ ರೈತರಿಗೆ ಕೋವಿಡ್ ಲಸಿಕೆ ಹಾಕಿಸುವ ನೋಂದಣಿ ಕಾರ್ಯ ಮಾಡುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ.
ಇಂದು ಬೆಳಗ್ಗೆ ನಡೆದ ಕಾಂಗ್ರೆಸ್ ಸಭೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯ ಕಾಂಗ್ರೆಸ್ ನಾಯಕರ ಜತೆ ವಿಡಿಯೋ ಸಂವಾದ ನಡೆಸಿದರು. ಈ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರ ನಾಯಕರು ಉಪಸ್ಥಿತರಿದ್ದು, ಹೈಕಮಾಂಡ್ ಸೂಚನೆಯನ್ನು ಸ್ವೀಕರಿಸಿದರು.
ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಹಾಗೂ ಪ್ರತಿಪಕ್ಷದ ನಾಯಕರ ಉಪಸ್ಥಿತಿಯಲ್ಲಿ ಕರ್ನಾಟಕ ಕಿಸಾನ್ ಕಾಂಗ್ರೆಸ್ ನಾಯಕರು ಜಿಲ್ಲಾವಾರು ರೈತರನ್ನು ಕೋವಿಡ್ ಲಸಿಕೆ ಪಡೆಯಲು ನೋಂದಣಿ ಮಾಡಿಸುವ ಹೊಣೆಗಾರಿಕೆಯನ್ನು ನಿಭಾಯಿಸುವಂತೆ ಸೂಚಿಸಲಾಯಿತು.
ಒಂದು ಮೊಬೈಲ್ ಫೋನ್ ಸಂಖ್ಯೆಯಿಂದ ಒಬ್ಬರು 4 ರೈತರನ್ನು/ಜನರನ್ನು ನೋಂದಾಯಿಸಬಹುದು. ಪ್ರತಿಯೊಬ್ಬ ವ್ಯಕ್ತಿಗೆ ತಮ್ಮದೇ ಆದ ಫೋಟೋ ಐಡಿ ಅಗತ್ಯವಿರಲಿದೆ. ಈ ಹಿನ್ನೆಲೆಯಲ್ಲಿ ಕಿಸಾನ್ ನಾಯಕರು ತಾವು ಸುರಕ್ಷಿತವಾಗಿ ವಾಟ್ಸಪ್ ಮುಖಾಂತರ ರೈತನ / ವ್ಯಕ್ತಿಯ ದಾಖಲೆಗಳನ್ನು ತರಿಸಿಕೊಂಡು ಮೊಬೈಲ್ ಆ್ಯಪ್ ಮುಖಾಂತರ ನೋಂದಣಿ ಮಾಡಿಸಿ ಆರೋಗ್ಯ ಸೇತು ಮೂಲಕ ಲಸಿಕೆಗಾಗಿ ನೋಂದಾಯಿಸಲು ಅವಕಾಶ ಇದೆ.
ನೀವು ಮೊದಲು ಅಪ್ಲಿಕೇಶನ್ ತೆರೆಯಬೇಕು. ನಂತರ ಹೋಮ್ ಸ್ಕ್ರೀನ್ನಲ್ಲಿ ಲಭ್ಯವಿರುವ ಕೋವಿನ್ ಟ್ಯಾಬ್ ಕ್ಲಿಕ್ ಮಾಡಿ ನೋಂದಾಯಿಸಬೇಕು ಎಂದು ರಾಜ್ಯ ಕಾಂಗ್ರೆಸ್ ನಾಯಕರು ಕಿಸಾನ್ ನಾಯಕರಿಗೆ ಸೂಚನೆ ನೀಡಿದ್ದಾರೆ. ಕೂಡಲೇ ಈ ನೋಂದಣಿಗೆ ಚಾಲನೆ ನೀಡಿ ಅತಿ ಹೆಚ್ಚಿನ ಸಂಖ್ಯೆ ನೋಂದಾಯಿಸುವಂತೆ ಕೋರುತ್ತೇನೆ. ಪ್ರತಿ ಜಿಲ್ಲೆಯಲ್ಲೂ ನಮ್ಮ ನಾಯಕರು ನಿರೀಕ್ಷಿಸಿದಷ್ಟು ಸಂಖ್ಯೆಯ ನೋಂದಣಿ ಆಗಲಿ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಕಳಕಳಿಯ ಅರಿವು ಜನರಿಗೆ ಆಗಬೇಕು. ಸರ್ಕಾರದ ವೈಫಲ್ಯವನ್ನು ನಾವು ಈ ರೀತಿ ಸರಿದೂಗಿಸಬೇಕಾಗಿದೆ ಎಂದು ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಲಾಕ್ಡೌನ್ 3ನೇ ದಿನ: ಅನಗತ್ಯ ಓಡಾಟಕ್ಕಿಲ್ಲ ಅವಕಾಶ, ವಾಹನ ಜಪ್ತಿ