ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ರಣಚಂಡಿ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಬಹುತೇಕ ಪ್ರಮುಖ ರಸ್ತೆಗಳು ನದಿ ರೀತಿಯಲ್ಲಿ ತುಂಬಿ ಹರಿಯುತ್ತಿವೆ. ಜನರಿಗೆ ಆಟೋ, ಕಾರು ಹಾಗೂ ಬೈಕ್ನಲ್ಲಿ ಕಚೇರಿಗೆ ಹೋಗಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ, ಬೆಂಗಳೂರಿನ ಐಟಿ ಸಿಬ್ಬಂದಿ ಕಚೇರಿ ತಲುಪಲು ಟ್ರ್ಯಾಕ್ಟರ್ ಮೊರೆ ಹೋಗಿದ್ದಾರೆ. ಟ್ರ್ಯಾಕ್ಟರ್ಗಳಲ್ಲಿ ಪ್ರಯಾಣ ಬೆಳೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಖ್ಯವಾಗಿ ಎಚ್ಎಎಲ್ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಯಮಲೂರು ರಸ್ತೆ ನೀರಿನಲ್ಲಿ ಮುಳುಗಿದೆ. ಈ ಪ್ರದೇಶದಲ್ಲಿ ವಾಸಿಸುವ ಐಟಿ ಕಂಪನಿಗಳ ಅನೇಕ ಉದ್ಯೋಗಿಗಳು ತಮ್ಮ ಕಚೇರಿಗೆ ತೆರಳಲು ಟ್ರ್ಯಾಕ್ಟರ್ ಬಳಸುತ್ತಿದ್ದಾರೆ.
ಈ ಮೂಲಕ ಐಟಿ ವೃತ್ತಿಪರರಿಗೆ ಟ್ರ್ಯಾಕ್ಟರ್ ಸವಾರಿ ಹೊಸ ಅನುಭವವನ್ನೂ ನೀಡಿತು. ನಗರದ ಹೆಚ್ಚಿನ ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ, ಅನೇಕ ಕಂಪನಿಗಳು ವರ್ಕ್ಫ್ರಮ್ ಹೋಂ ಸಹ ಘೋಷಣೆ ಮಾಡಿವೆ.
ಐಟಿ ಉದ್ಯೋಗಿಯೊಬ್ಬರು ಮಾತನಾಡಿ, "ಹೆಚ್ಚು ರಜೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದು ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. 50 ರೂಪಾಯಿಗೆ ಟ್ರ್ಯಾಕ್ಟರ್ನಲ್ಲಿ ಡ್ರಾಪ್ ತೆಗೆದುಕೊಂಡಿದ್ದೇವೆ" ಎಂದರು.
ಇನ್ನು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರಿನಲ್ಲಿ ಮಳೆಯಿಂದ ಜಲಾವೃತಗೊಂಡ ಪ್ರದೇಶಗಳ ನಷ್ಟ ಪರಿಹಾರ ಘೋಷಣೆ ಮಾಡಿದ್ದು, 225 ಕೋಟಿ ರೂ. ಐಟಿ ಕಂಪನಿಗಳಿಗೆ ನೀಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಮಹಾಮಳೆಗೆ ಮುಳುಗಿದ ಮಹಾನಗರಿ: ಭಾರಿ ಮಳೆಗೆ ನದಿಯಂತಾದ ಬೆಂಗಳೂರು ರಸ್ತೆಗಳು
ಬೆಂಗಳೂರಿನಲ್ಲಿ ಆಗಸ್ಟ್ 31ರಿಂದ ನಿರಂತರವಾಗಿ ಮಳೆಯಾಗ್ತಿದೆ. ಕಳೆದ ಭಾನುವಾರ ರಾತ್ರಿ ಧಾರಾಕಾರ ಪ್ರಮಾಣದಲ್ಲಿ ಮಳೆ ಸುರಿದಿದೆ. ಇಲ್ಲಿಯವರೆಗೆ ಸೆಪ್ಟೆಂಬರ್ ತಿಂಗಳಲ್ಲಿ ದಾಖಲೆಯ 709 ಮಿ.ಮೀ ಮಳೆಯಾಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಬೆಳ್ಳಂದೂರು, ಸರ್ಜಾಪುರ, ದಾಸರಹಳ್ಳಿ, ರಾಜರಾಜೇಶ್ವರಿನಗರ, ಆರ್ಆರ್ ನಗರಗಳ ಅನೇಕ ಭಾಗಗಳು ಹೊಳೆಯಂತೆ ಭಾಸವಾಗುತ್ತಿವೆ.