ನವದೆಹಲಿ: ಎಎಪಿ- ಬಿಜೆಪಿ ನಡುವೆ ರಾಜಕೀಯ ತಾರಕಕ್ಕೇರಿರುವ 'ಶೀಶ್ ಮಹಲ್' ಆರೋಪ ಇದೀಗ ರಾಷ್ಟ್ರ ರಾಜಧಾನಿಯಲ್ಲಿ ದೊಡ್ಡ ಹೈಡ್ರಾಮಕ್ಕೆ ಕಾರಣವಾಗಿದೆ. ಬಿಜೆಪಿಗರು ಶೀಶ್ ಮಹಲ್ ಗುರಿಯಾಗಿಸಿ ಟೀಕಿಸಿರುವ ಬೆನ್ನಲ್ಲೇ ಇಂದು ಎಎಪಿ ನಾಯಕರಾದ ಸೌರಭ್ ಭಾರಧ್ವಾಜ್ ಮತ್ತು ಸಂಜಯ್ ಸಿಂಗ್ ಮಾಧ್ಯಮಗಳೊಂದಿಗೆ ಸಿಎಂ ನಿವಾಸ ತೋರಿಸಲು ಬಂಗಲೆ ಬಳಿಕ ಹೆಜ್ಜೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಅವರನ್ನು ಬಂಗಲೆ ಎದುರು ದೆಹಲಿ ಪೊಲೀಸರು ತಡೆದು ನಿಲ್ಲಿಸಿದರು.
ಈ ಹಿಂದೆ ದೆಹಲಿ ಸಿಎಂ ಆಗಿದ್ದ ಕೇಜ್ರಿವಾಲ್ ಮನೆಗೆ ಐಷಾರಾಮಿ ವಸ್ತುಗಳನ್ನು ಉಪಯೋಗಿಸಿ, ಶೀಶ್ ಮಹಲ್ ಕಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪ್ರತಿಯಾಗಿ ಇಂದು ಎಎಪಿ ನಾಯಕರು ಮನೆಯ ನವೀಕರಣ ಹೇಗೆ ನಡೆದಿತ್ತು ಎಂಬುದನ್ನು ತೋರಿಸಲು ಮಾಧ್ಯಮಗಳೊಂದಿಗೆ ಅರವಿಂದ್ ಕೇಜ್ರಿವಾಲ್ ವಾಸವಾಗಿದ್ದ ಫ್ಲಾಗ್ಸ್ಟಾಫ್ ರಸ್ತೆಯಲ್ಲಿನ ಬಂಗಲೆ ಪ್ರವೇಶಕ್ಕೆ ಮುಂದಾದರು. ಆದರೆ, ಈ ವೇಳೆ ಅವರನ್ನು ತಡೆಯಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಭಾರಧ್ವಾಜ್, ಮುಖ್ಯಮಂತ್ರಿಗಳ ನಿವಾಸ ಪ್ರವೇಶಿಸಲು ನಮಗೆ ಯಾಕೆ ಅನುಮತಿ ಬೇಕು? ಯಾರು ನಮ್ಮನ್ನು ತಡೆಯಲು ನಿಮಗೆ ಸೂಚನೆ ನೀಡಿದವರು? ನಾನು ಸಚಿವನಾಗಿದ್ದು, ನಾನು ಇಲ್ಲಿ ತಪಾಸಣೆಗೆ ಆಗಮಿಸಿದ್ದೇನೆ. ನೀವು ಹೇಗೆ ನನ್ನನ್ನು ತಡೆಯುತ್ತೀರಾ? ನಿಮಗೆ ಏನಾದರೂ ಲೆಫ್ಟಿನೆಂಟ್ ಗವರ್ನರ್ ಅವರಿಂದ ನಿರ್ದೇಶನ ಬಂದಿದ್ಯಾ? ನನ್ನ ಮೇಲಿರುವ ಏಕೈಕ ವ್ಯಕ್ತಿ ಅವರೇ ಎಂದು ಪೊಲೀಸ್ ಸಿಬ್ಬಂದಿಗಳೊಂದಿಗೆ ವಾಗ್ದಾಳಿ ನಡೆಸಿದರು.
ಬಿಜೆಪಿ ಆರೋಪಿಸಿರುವಂತೆ ಅರವಿಂದ್ ಕೇಜ್ರಿವಾಲ್ ಅವರು ವಾಸವಿದ್ದ ಅಧಿಕೃತ ನಿವಾಸ 6, ಫ್ಲಾಗ್ಸ್ಟಾಫ್ ರಸ್ತೆಗೆ ಕರೆದುಕೊಂಡು ಹೋಗಿ, ಅಲ್ಲಿರುವ ಬಂಗಾರದ ಕಮೋಡ್, ಈಜುಕೊಳ, ಮಿನಿ ಬಾರ್ ಪ್ರದರ್ಶಿಸುತ್ತೇನೆ. ನೀವು ಎಲ್ಲರೂ ಬುಧವಾರ ಬೆಳಗ್ಗೆ ಬಂಗಲೆ ಬಳಿ ಬನ್ನಿ ಎಂದು ಭಾರದ್ವಾಜ್ ಅವರು ಮಾಧ್ಯಮಗಳಿಗೆ ಆಹ್ವಾನಿಸಿದ್ದರು.
ಇದೇ ವೇಳೆ ಟೀಕಾಪ್ರಹಾರ ನಡೆಸಿದ ಅವರು, ಬಿಜೆಪಿ ಪ್ರತಿದಿನ ಒಂದು ಹೊಸ ವಿಡಿಯೋ ಮತ್ತು ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಿಎಂ ನಿವಾಸದ ನವೀಕರಣಕ್ಕೆ ಕೋಟ್ಯಂತರ ರೂ. ವ್ಯಯ ಮಾಡುತ್ತಿದೆ ಎಂದು ಆರೋಪಿಸುತ್ತಿದೆ. ಇಂದು ಇದೀಗ ಮಾಧ್ಯಮ ಸಿಬ್ಬಂದಿಯೊಂದಿಗೆ ನಾವು ಇಲ್ಲಿಗೆ ಬಂದಾಗ ಬಿಜೆಪಿ ಓಡಿ ಹೋಗುತ್ತಿದ್ದು, ಮೂರು ಹಂತದ ಬ್ಯಾರಿಕೇಡ್ ಅನ್ನು ನಿರ್ಮಾಣ ಮಾಡಿ ಮಾಧ್ಯಮದವರನ್ನು ತಡೆಯುವ ಯತ್ನ ನಡೆಸಲಾಗಿದೆ, ವಾಟರ್ ಕ್ಯಾನೊನ್ಸ್ ಹಾಗೂ ಹೆಚ್ಚುವರಿ ಡಿಸಿಪಿಯನ್ನು ನಿಯೋಜಿಸಲಾಗಿದೆ. ಬಿಜೆಪಿ ಆರೋಪಿಸಿದಂತೆ ಸಿಎಂ ಮನೆಯನ್ನು ನೋಡೋಣ ಹಾಗೂ ₹ 2,700 ಕೋಟಿಯಲ್ಲಿ ನಿರ್ಮಾಣವಾಗಿರುವ ಪಿಎಂ ನಿವಾಸವನ್ನು ಸಹ ವೀಕ್ಷಿಸೋಣ ಎಂದು ಸವಾಲು ಹಾಕಿದರು.
6, ಫ್ಲಾಗ್ಸ್ಟಾಫ್ ರಸ್ತೆ ಬಂಗಲೆ ವಿರುದ್ಧ ಬಿಜೆಪಿ ಟೀಕಿಸಿರುವುದಕ್ಕೆ ಪ್ರತಿಯಾಗಿ ಎಎಪಿ ನಾಯಕರು ಪ್ರಧಾನಿ ನಿವಾಸವನ್ನು 'ರಾಜ ಮಹಲ್' ಎಂದು ಕರೆದಿದ್ದು, ಐಷಾರಾಮಿ ಜೀವನಶೈಲಿಯೊಂದಗೆ 2,700 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: 'ನನಗಾಗಿ ಐಷಾರಾಮಿ ಬಂಗಲೆ ಕಟ್ಟಿಕೊಂಡಿಲ್ಲ, ಬಡವರಿಗಾಗಿ 4 ಕೋಟಿ ಸೂರು ನಿರ್ಮಿಸಿದ್ದೇವೆ': ಕೇಜ್ರಿವಾಲ್ಗೆ ಮೋದಿ ಟಾಂಗ್