ಮುಂಬೈ: ಬೌದ್ಧಿಕ ಅಂಗವೈಕಲ್ಯ ಹೊಂದಿರುವ ಮಹಿಳೆಗೆ ತಾಯಿಯಾಗುವ ಹಕ್ಕಿಲ್ಲವೇ ಎಂದು ಬಾಂಬೆ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ. ತನ್ನ 27 ವರ್ಷದ ಗರ್ಭಿಣಿ ಮಗಳು ಬೌದ್ಧಿಕ ಅಂಗವಿಕಲೆ ಹಾಗೂ ಅವಿವಾಹಿತೆಯಾಗಿರುವುದರಿಂದ ಆಕೆಯ 21 ವಾರಗಳ ಭ್ರೂಣವನ್ನು ತೆಗೆದುಹಾಕಲು ಅನುಮತಿ ನೀಡುವಂತೆ ಆಕೆಯ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ನ್ಯಾಯಾಲಯ ಈ ಪ್ರಶ್ನೆ ಕೇಳಿದೆ.
ನ್ಯಾಯಮೂರ್ತಿಗಳಾದ ಆರ್.ವಿ.ಘುಗೆ ಮತ್ತು ರಾಜೇಶ್ ಪಾಟೀಲ್ ಅವರ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ತನ್ನ ಮಗಳು ಗರ್ಭಧಾರಣೆಯನ್ನು ಮುಂದುವರಿಸಲು ಬಯಸಿದ್ದಾಳೆ ಎಂದು ವ್ಯಕ್ತಿ ಅರ್ಜಿಯಲ್ಲಿ ತಿಳಿಸಿರುವುದು ಗಮನಾರ್ಹ.
ಮುಂಬೈನ ಸರ್ಕಾರಿ ಜೆಜೆ ಆಸ್ಪತ್ರೆಯಲ್ಲಿ ವೈದ್ಯರ ತಂಡದಿಂದ ಮಹಿಳೆಯ ಸಂಪೂರ್ಣ ವೈದ್ಯಕೀಯ ಪರೀಕ್ಷೆ ನಡೆಸುವಂತೆ ನ್ಯಾಯಪೀಠ ಕಳೆದ ವಾರ ನಿರ್ದೇಶನ ನೀಡಿತ್ತು. ಬುಧವಾರ ವೈದ್ಯಕೀಯ ಮಂಡಳಿ ಸಲ್ಲಿಸಿದ ವರದಿಯ ಪ್ರಕಾರ, ಮಹಿಳೆ ಮಾನಸಿಕ ಅಸ್ವಸ್ಥೆಯಾಗಿಲ್ಲ ಅಥವಾ ಅನಾರೋಗ್ಯದಿಂದ ಬಳಲುತ್ತಿಲ್ಲ ಹಾಗೂ ಶೇಕಡಾ 75 ರಷ್ಟು ಐಕ್ಯೂನೊಂದಿಗೆ ಗಡಿರೇಖೆಯ ಬೌದ್ಧಿಕ ಅಂಗವೈಕಲ್ಯ ಹೊಂದಿದ್ದಾರೆ.
ಮಹಿಳೆಯ ಪೋಷಕರು ಆಕೆಯನ್ನು ಯಾವುದೇ ಮಾನಸಿಕ ಸಮಾಲೋಚನೆ ಅಥವಾ ಚಿಕಿತ್ಸೆಗೆ ಒಳಪಡಿಸಿಲ್ಲ, ಬದಲಾಗಿ 2011 ರಿಂದ ಆಕೆಗೆ ಔಷಧಿಗಳನ್ನು ಮಾತ್ರ ನೀಡುತ್ತಿದ್ದಾರೆ ಎಂಬುದನ್ನು ನ್ಯಾಯಪೀಠ ಪರಿಗಣಿಸಿತು.
ಭ್ರೂಣದಲ್ಲಿ ಯಾವುದೇ ಅಸಹಜತೆಗಳು ಅಥವಾ ಅಸಂಗತತೆಗಳಿಲ್ಲ ಮತ್ತು ಗರ್ಭಧಾರಣೆಯ ಮುಂದುವರಿಕೆಗೆ ಮಹಿಳೆ ವೈದ್ಯಕೀಯವಾಗಿ ಸದೃಢರಾಗಿದ್ದಾರೆ ಎಂದು ವೈದ್ಯರ ತಂಡದ ವರದಿ ತಿಳಿಸಿದೆ. ಜೊತೆಗೆ ಗರ್ಭಧಾರಣೆಯನ್ನು ಕೊನೆಗೊಳಿಸಲೂ ಅವಕಾಶವಿದೆ ಎಂದು ವರದಿ ಹೇಳಿದೆ.
ಇಂತಹ ವಿಷಯಗಳಲ್ಲಿ ಗರ್ಭಿಣಿ ಮಹಿಳೆಯ ಒಪ್ಪಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೆಚ್ಚುವರಿ ಸರ್ಕಾರಿ ವಕೀಲ ಪ್ರಾಚಿ ತಟ್ಕೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಮಹಿಳೆ ಮಾನಸಿಕವಾಗಿ ಅಂಗವಿಕಲ ಅಥವಾ ಮಾನಸಿಕ ಅಸ್ವಸ್ಥಳಲ್ಲ ಎಂದು ವೈದ್ಯಕೀಯ ಮಂಡಳಿಯ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂಬ ಅಂಶವನ್ನು ನ್ಯಾಯಪೀಠ ಮುಖ್ಯವಾಗಿ ಗಮನಿಸಿತು.
"ಮಹಿಳೆ ಸರಾಸರಿಗಿಂತ ಕಡಿಮೆ ಬುದ್ಧಿವಂತಿಕೆ ಹೊಂದಿದ್ದಾಳೆ ಎಂದು ವರದಿ ಹೇಳಿದೆ. ಆದರೆ ನಾವ್ಯಾರೂ ಸಹ ಸೂಪರ್ ಬುದ್ಧಿವಂತರಲ್ಲ. ನಾವೆಲ್ಲರೂ ಮನುಷ್ಯರು ಮತ್ತು ಪ್ರತಿಯೊಬ್ಬರೂ ವಿಭಿನ್ನ ಮಟ್ಟದ ಬುದ್ಧಿವಂತಿಕೆಯನ್ನು ಹೊಂದಿರುತ್ತೇವೆ" ಎಂದು ನ್ಯಾಯಾಲಯ ಹೇಳಿತು.
"ಅವಳು ಸರಾಸರಿಗಿಂತ ಕಡಿಮೆ ಬುದ್ಧಿವಂತಿಕೆಯನ್ನು ಹೊಂದಿದ್ದಾಳೆ ಎಂಬ ಕಾರಣಕ್ಕಾಗಿ ಆಕೆಗೆ ತಾಯಿಯಾಗಲು ಹಕ್ಕಿಲ್ಲವೇ? ಸರಾಸರಿಗಿಂತ ಕಡಿಮೆ ಬುದ್ಧಿವಂತಿಕೆ ಹೊಂದಿರುವ ವ್ಯಕ್ತಿಗಳಿಗೆ ಪೋಷಕರಾಗಲು ಹಕ್ಕಿಲ್ಲ ಎಂದು ಹೇಳಿದರೆ, ಅದು ಕಾನೂನಿಗೆ ವಿರುದ್ಧವಾಗಿರುತ್ತದೆ" ಎಂದು ಹೈಕೋರ್ಟ್ ಹೇಳಿತು.
ವೈದ್ಯಕೀಯ ಗರ್ಭಪಾತ ಕಾಯ್ದೆಯ ನಿಬಂಧನೆಗಳ ಪ್ರಕಾರ, ಮಹಿಳೆ ಮಾನಸಿಕ ಅಸ್ವಸ್ಥರಾಗಿರುವ ಸಂದರ್ಭಗಳಲ್ಲಿ 20 ವಾರಗಳ ಗರ್ಭಧಾರಣೆಯ ಅವಧಿಯನ್ನು ಮೀರಿದ ಭ್ರೂಣದ ಗರ್ಭಪಾತಕ್ಕೆ ಅವಕಾಶವಿದೆ.
"ಬಾರ್ಡರ್ ಲೈನ್ ಪ್ರಕರಣವನ್ನು ಮಾನಸಿಕ ಅಸ್ವಸ್ಥತೆ ಎಂದು ಹೇಳಲು ಸಾಧ್ಯವಿಲ್ಲ. ಆಕೆಯನ್ನು (ಪ್ರಸ್ತುತ ಪ್ರಕರಣದಲ್ಲಿ ಗರ್ಭಿಣಿ ಮಹಿಳೆ) ಮಾನಸಿಕ ಅಸ್ವಸ್ಥ ಎಂದು ಘೋಷಿಸಲಾಗಿಲ್ಲ." ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರರ ಪರ ವಕೀಲರು, ಮಹಿಳೆ ಈಗ ಗರ್ಭಧಾರಣೆಗೆ ಕಾರಣನಾದ ತಾನು ಸಂಬಂಧ ಹೊಂದಿರುವ ಪುರುಷನ ಗುರುತನ್ನು ತನ್ನ ಹೆತ್ತವರಿಗೆ ಬಹಿರಂಗಪಡಿಸಿದ್ದಾಳೆ ಎಂದು ಹೈಕೋರ್ಟ್ಗೆ ಮಾಹಿತಿ ನೀಡಿದರು. ಆ ವ್ಯಕ್ತಿಯನ್ನು ಭೇಟಿಯಾಗುವಂತೆ ಮತ್ತು ಆತ ಅವಳನ್ನು ಮದುವೆಯಾಗಲು ಸಿದ್ಧನಿದ್ದಾನೆಯೇ ಎಂದು ಕೇಳುವಂತೆ ನ್ಯಾಯಾಲಯವು ಮಹಿಳೆಯ ಪೋಷಕರಿಗೆ ಸೂಚಿಸಿತು. ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜನವರಿ 13ಕ್ಕೆ ಮುಂದೂಡಿದೆ.