ಬೆಂಗಳೂರು: ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.
ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಬೇಡಿಕೆ ಹಾಗೂ ಕುಂದುಕೊರತೆಗಳ ಬಗ್ಗೆ ಸಚಿವರು ಚರ್ಚೆ ನಡೆಸಿದರು. ಗೌರವಧನ ಹೆಚ್ಚಳ, ಮುಂಬಡ್ತಿ, ಗ್ರಾಚ್ಯುಟಿ ಸೌಲಭ್ಯ, ಉಚಿತ ವೈದ್ಯಕೀಯ ಸೌಲಭ್ಯ, ಅನಾರೋಗ್ಯ ಪೀಡಿತರಿಗೆ ಸ್ವಯಂ ನಿವೃತ್ತಿ ಯೋಜನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಚಿವರು, ವಿವಿಧ ಸಂಘಟನೆಗಳೊಂದಿಗೆ ಚರ್ಚಿಸಿದರು.
ಗೌರವಧನ ಹೆಚ್ಚಿಸಲು ಪ್ರಯತ್ನ : ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ''ನಾನು ಎಂದಿಗೂ ಅಂಗನವಾಡಿ ಕಾರ್ಯಕರ್ತೆಯರ ಪರ. ಇಡೀ ದೇಶಕ್ಕೆ ನಮ್ಮ ಅಂಗನವಾಡಿಗಳು ಮಾದರಿಯಾಗಿವೆ. ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ, ಮುಂದಿನ ಬಜೆಟ್ನಲ್ಲಿ ಗೌರವಧನ ಹೆಚ್ಚಿಸಲು ಪ್ರಯತ್ನಿಸಲಾಗುವುದು'' ಎಂದು ತಿಳಿಸಿದರು.
ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಬೇಡಿಕೆ ಹಾಗೂ ಕುಂದುಕೊರತೆಗಳ ಬಗ್ಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಗೌರವಧನ ಹೆಚ್ಚಳ, ಮುಂಬಡ್ತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸುವ ಭರವಸೆ ನೀಡಲಾಯಿತು. ನಾನು ಎಂದಿಗೂ ದುಡಿಯುವ ಶ್ರಮಿಕರ, ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಪರ… pic.twitter.com/sxMAiZke8j
— Laxmi Hebbalkar (@laxmi_hebbalkar) January 8, 2025
ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಎನ್. ಸಿದ್ದೇಶ್ವರ್, ಸಚಿವರ ಆಪ್ತ ಕಾರ್ಯದರ್ಶಿ ಡಾ. ಟಿ.ಎಚ್. ವಿಶ್ವನಾಥ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಎಐಟಿಯುಸಿ ಕಾರ್ಯದರ್ಶಿ ಎಂ.ಜ ಯಮ್ಮ, ಶಿವಶಂಕರ್, ಸಿಐಟಿಯು ಸಂಘಟನೆಯ ಸುನಂದ, ಎಐಯುಟಿಯುಸಿ ಉಮಾ, ಸ್ವತಂತ್ರ ಸಂಘಟನೆಯ ಪ್ರೇಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಅಪರಾಧಿಗಳಿಗೆ ಭಯ, ಜನಸಾಮಾನ್ಯರಿಗೆ ಭಯಮುಕ್ತ ವಾತಾವರಣ ನಿರ್ಮಿಸಿ: ಪೊಲೀಸರಿಗೆ ಸಿಎಂ ಸೂಚನೆ