ಬೆಂಗಳೂರು : ಕರ್ತವ್ಯದ ವೇಳೆ ನೌಕರನಿಗೆ ಉಂಟಾದ ಹೃದಯಾಘಾತವನ್ನು ‘ಅಪಘಾತ’ ಎಂದು ಪರಿಗಣಿಸಲು ಬರುವುದಿಲ್ಲ ಎಂಬ ಸರ್ಕಾರಿ ಸ್ವಾಮ್ಯದ ಈಶಾನ್ಯ ರಸ್ತೆ ಸಾರಿಗೆ ನಿಗಮದ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಹೈಕೋರ್ಟ್, ಕರ್ತವ್ಯ ನಿರ್ವಹಣೆ ವೇಳೆ ನೌಕರ ಹೃದಯಾಘಾತದಿಂದ ಸಾವನ್ನಪ್ಪಿದರೆ, ಅದನ್ನು ಅಪಘಾತವೆಂದೇ ಪರಿಗಣಿಸಬೇಕು ಎಂದು ತೀರ್ಪು ನೀಡಿದೆ. ಹಾಗೆಯೇ ಮೃತನ ಕುಟುಂಬಕ್ಕೆ ಪರಿಹಾರ ನೀಡಲು ನಿರ್ದೇಶಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಅಪಘಾತ ಎಂದರೆ ಊಹಿಸಲಾಗದ ಹಾಗೂ ಅನಿರೀಕ್ಷಿತ ಘಟನೆಯಾಗಿರುತ್ತದೆ. ಅದನ್ನು ನಿರೀಕ್ಷೆ ಮಾಡಲು ಅಥವಾ ಯೋಜಿಸಲು ಸಾಧ್ಯವಿಲ್ಲ. ಹೀಗಾಗಿ, ಕರ್ತವ್ಯ ಮೇಲಿದ್ದಾಗ ನೌಕರನಿಗೆ ಹೃದಯಾಘಾತ ಉಂಟಾದರೆ, ಅದನ್ನು ಅಪಘಾತವೆಂದೇ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ
ಎನ್‌ಇಕೆಆರ್‌ಟಿಸಿಯಲ್ಲಿ ಬಸ್ ಚಾಲಕರಾಗಿದ್ದ ವಿಜಯ್ ಕುಮಾರ್‌ಗೆ, 2012ರ ಸೆಪ್ಟೆಂಬರ್ 5ರಂದು ಸಂಜೆ 4:45 ಸಮಯದಲ್ಲಿ ಕಲಬುರಗಿ ಯೂನಿರ್ವಸಿಟಿ ಆವರಣದ ಬಳಿ ಬಸ್ ಚಾಲನೆ ಮಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿದರೂ, ಮಾರ್ಗಮಧ್ಯೆ ವಿಜಯ್ ಕುಮಾರ್ ಕೊನೆಯುಸಿರೆಳೆದಿದ್ದರು. ಇದರಿಂದ ಅವರ ಪತ್ನಿ ಮತ್ತು ಮಕ್ಕಳು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಕರ್ತವ್ಯ ಮೇಲಿದ್ದಾಗ ಒತ್ತಡ ಮತ್ತು ಆಯಾಸ ಉಂಟಾದ ಪರಿಣಾಮ ವಿಜಯ್ ಕುಮಾರ್ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ವಾದಿಸಿದ್ದರು.
ಇದನ್ನೂ ಓದಿ: ಹೈಕೋರ್ಟ್ನಲ್ಲಿದ್ದ ಲ್ಯಾಪ್ಟಾಪ್ ಎಗರಿಸಿದ ಕಳ್ಳರು: ಎಫ್ಐಆರ್ ದಾಖಲು
ವಿಚಾರಣೆ ನಡೆಸಿದ್ದ ಕಲಬುರಗಿಯ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಮೃತ ನೌಕರನ ಕುಟುಂಬದವರಿಗೆ ಪರಿಹಾರ ವಿತರಣೆ ಮಾಡುವ ದಿನದವರೆಗೂ ಅನ್ವಯವಾಗುವಂತೆ ವಾರ್ಷಿಕ ಶೇ.12ರಷ್ಟು ಬಡ್ಡಿದರದಲ್ಲಿ ಒಟ್ಟು 21,95,090 ರೂ. ಪರಿಹಾರ ನೀಡುವಂತೆ ಎನ್‌ಇಕೆಆರ್‌ಟಿಸಿಗೆ 2017ರ ಏಪ್ರಿಲ್ 5ರಂದು ಆದೇಶಿಸಿತ್ತು.
ಈ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಎನ್‌ಇಕೆಆರ್‌ಟಿಸಿ, ನೌಕರರ ಪರಿಹಾರ ಕಾಯ್ದೆ-1923ರ ಸೆಕ್ಷನ್ 3ರ ಪ್ರಕಾರ ಹೃದಯಾಘಾತವು ‘ಅಪಘಾತ ಅಥವಾ ವೈಯಕ್ತಿಕ ಗಾಯ’ದ ವ್ಯಾಪ್ತಿಗೆ ಬರುವುದಿಲ್ಲ. ಪರಿಹಾರ ಕಲ್ಪಿಸಬೇಕಾದರೆ ಚಾಲಕ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿ ಅಥವಾ ವೈಯಕ್ತಿಕವಾಗಿ ಗಾಯಗೊಂಡು ಸಾವನ್ನಪ್ಪಿರಬೇಕು. ಪ್ರಕರಣದಲ್ಲಿ ಒತ್ತಡ ಹಾಗೂ ಆಯಾಸದಿಂದ ವಿಜಯ್ ಕುಮಾರ್‌ಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ಆತನ ಕುಟುಂಬದವರು ಹೇಳಿದ್ದಾರೆ. ಆದರೆ, ಅದನ್ನು ಸಾಬೀತುಪಡಿಸುವ ದಾಖಲೆ ಒದಗಿಸಿಲ್ಲ ಎಂದು ವಾದಿಸಿತ್ತು.
ಅಲ್ಲದೆ, ಕರ್ತವ್ಯ ನಿರ್ವಹಣೆ ವೇಳೆ ಸಾವು ಸಂಭವಿಸಿದ ಎಂಬ ಮಾತ್ರಕ್ಕೆ ಅದನ್ನು ಅಪಘಾತ ಎನ್ನಲಾಗದು. ವಿಜಯ್ ಕುಮಾರ್ ಅವರದ್ದು ಸಹಜ ಸಾವು. ಅವರ ಸಾವಿಗೂ ಮತ್ತು ಮಾಡುತ್ತಿದ್ದ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲ. ವಿಜಯ್ ಕುಮಾರ್ ಅಪಘಾತಕ್ಕೆ ಒಳಗಾಗಿಲ್ಲ. ವೈಯಕ್ತಿಕ ಗಾಯಕ್ಕೂ ತುತ್ತಾಗಿಲ್ಲ. ಹೀಗಾಗಿ ಪರಿಹಾರ ಕಲ್ಪಿಸಲಾಗದು ಎಂದು ಸಮರ್ಥಿಸಿಕೊಂಡಿತ್ತು.
ವಾದ ತಿರಸ್ಕರಿಸಿದ ಹೈಕೋರ್ಟ್
ಎನ್‌ಇಕೆಆರ್‌ಟಿಸಿ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ಘಟನೆ ಸಂಭವಿಸಿದ ದಿನದಂದು ವಿಜಯ್ ಕುಮಾರ್ ಬೆಳಗ್ಗೆ 6 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಸಂಜೆ ಐದು ಗಂಟೆಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ಹೃದಯಾಘಾತವೇ ಒಂದು ಅಪಘಾತ. ಮೃತರು 22 ವರ್ಷ ಕಾಲ ನಿಗಮದ ಭಾರಿ ಗಾತ್ರದ ಬಸ್ ಚಾಲನೆ ಮಾಡಿದ್ದಾರೆ. ಅದರಲ್ಲೂ ಜನ ಹಾಗೂ ವಾಹನ ಸಂಚಾರ ಹೆಚ್ಚಿರುವಂತಹ ಕಲಬುರಗಿ ಜಿಲ್ಲಾ ಕೇಂದ್ರದಲ್ಲಿ ಬಸ್ ಚಲಾಯಿಸಿದ್ದಾರೆ. ಇದರಿಂದ ಸಹಜವಾಗಿಯೇ ಆಯಾಸ ಮತ್ತು ಒತ್ತಡ ಏರ್ಪಡುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ವಾಹನ ಚಾಲನೆ ಕೆಲಸದ ಸ್ವರೂಪವೇ ಒತ್ತಡದಿಂದ ಕೂಡಿರುತ್ತದೆ. ವಿಜಯ್ ಕುಮಾರ್ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿರುವುದನ್ನು ವೈದ್ಯಕೀಯ ದಾಖಲೆಗಳು, ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ ಸಂಭವಿಸಿರುವುದನ್ನು ಇತರೆ ದಾಖಲೆಗಳು ಸಾಬೀತುಪಡಿಸುತ್ತದೆ. ಆದ್ದರಿಂದ ಪರಿಹಾರ ಕಲ್ಪಿಸಲು ಕೆಳ ನ್ಯಾಯಾಲಯ ಹೊರಡಿಸಿರುವ ಆದೇಶವು ಸೂಕ್ತವಾಗಿದೆ ಎಂದು ಆದೇಶಿಸಿದ ಪೀಠ ಸಾರಿಗೆ ಸಂಸ್ಥೆಯ ಮೇಲ್ಮನವಿ ವಜಾಗೊಳಿಸಿದೆ. ಜತೆಗೆ, ಪರಿಹಾರ ಮೊತ್ತವನ್ನು ಠೇವಣಿ ಇಟ್ಟಿದ್ದರೆ, ಅದನ್ನು ಕೂಡಲೇ ಮೃತ ನೌಕರರ ಪತ್ನಿ ಹಾಗೂ ಮಕ್ಕಳಿಗೆ ವಿತರಿಸುವಂತೆಯೂ ಕೆಳ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.