ಬೆಂಗಳೂರು: ಕಾಂಗ್ರೆಸ್ ಆರೋಪಗಳ ವಿರುದ್ಧದ ಪಂಚ ಸಚಿವರ ಹೋರಾಟದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಗೌಣವಾಗಿರುವುದು ಎದ್ದು ಕಂಡುಬಂತು.
ಕೋವಿಡ್-19 ಉಪಕರಣ ಖರೀದಿಯಲ್ಲಿನ ಹಗರಣದ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಲು ಇಂದು ಪಂಚ ಸಚಿವರು ಕಣಕ್ಕಿಳಿದಿದ್ದರು. ಸಿಎಂ ಸೂಚನೆ ಮೇರೆಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಐವರು ಸಚಿವರು ಕಾಂಗ್ರೆಸ್ ಆರೋಪಕ್ಕೆ ಇಂಚಿಂಚಾಗಿ ದಾಖಲೆ ಸಮೇತ ಸ್ಪಷ್ಟನೆ ನೀಡುತ್ತಾ ಹೋದರು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಡಿಸಿಎಂ ಅಶ್ವತ್ಥ ನಾರಾಯಣ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಕಾಂಗ್ರೆಸ್ ಆರೋಪಕ್ಕೆ ಕೌಂಟರ್ ನೀಡಿದರು.
ಹಗರಣ ಆರೋಪಕ್ಕೆ ಪ್ರತ್ಯುತ್ತರ ನೀಡಲು ಮುಂಚೂಣಿಯಲ್ಲಿರಬೇಕಾದ ಆರೋಗ್ಯ ಸಚಿವರೇ ಇಂದಿನ ಸುದ್ದಿಗೋಷ್ಠಿಯಲ್ಲಿ ಸೈಡ್‌ಲೈನ್ ಆಗಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಹಗರಣ ಆರೋಪದಲ್ಲಿ ಟಾರ್ಗೆಟ್ ಮಾಡಿದ್ದೇ ಆರೋಗ್ಯ ಸಚಿವ ಶ್ರೀರಾಮುಲುರನ್ನು. ಹೀಗಾಗಿ ಕಾಂಗ್ರೆಸ್ ಆರೋಪಕ್ಕೆ ಸುದ್ದಿಗೋಷ್ಠಿಯಲ್ಲಿ ಮುಂಚೂಣಿಯಲ್ಲಿದ್ದು, ತಿರುಗೇಟು ನೀಡಬೇಕಾಗಿದ್ದವರು ಶ್ರೀರಾಮುಲು. ಆದರೆ ಇಡೀ ಸುದ್ದಿಗೋಷ್ಠಿಯಲ್ಲಿ ಅವರು ಮೌನಕ್ಕೆ ಶರಣಾಗಿದ್ದರು.
ಮುಂಚೂಣಿಯಲ್ಲಿರಬೇಕಾದ ಶ್ರೀರಾಮುಲು ಸೈಲೆಂಟಾಗಿದ್ದೇಕೆ?:
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಸಚಿವ ಶ್ರೀರಾಮುಲು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಆರೋಗ್ಯ ಸಚಿವನಾಗಿ ಇಲಾಖೆ ಅಧಿಕಾರಿಗಳೇ ನನಗೆ ಸಹಕರಿಸುತ್ತಿಲ್ಲ. ನನಗೆ ಕೋವಿಡ್ ಟಾಸ್ಕ್ ಫೊರ್ಸ್ ಅಧ್ಯಕ್ಷ ಸ್ಥಾನವೇ ಬೇಡ ಎಂದು ತಮ್ಮ ಅಸಮಾಧಾನವನ್ನು ಸಿಎಂ ಮುಂದೆ ಹೊರ ಹಾಕಿದ್ದಾರೆ.
ಸಮಿತಿ ಸಭೆಯಲ್ಲಿ ನನ್ನನ್ನು ಓವರ್ಟೇಕ್ ಮಾಡಲಾಗುತ್ತಿದೆ. ಸಮಿತಿ ಸಭೆಯಲ್ಲಿ ನನ್ನ ಮಾತಿಗೆ ಗೌರವ ನೀಡ್ತಿಲ್ಲ. ಆರೋಗ್ಯ ಇಲಾಖೆ ನನಗೇನೂ ಹೊಸತಲ್ಲ, ಅನುಭವ ಇದೆ. ಆದರೆ, ಈ ಬಾರಿ ಇತರೆ ಸಚಿವರಿಂದ ಹಸ್ತಕ್ಷೇಪ ಹೆಚ್ಚಾಗಿದೆ. ನನ್ನ ಇಲಾಖೆಯಲ್ಲಿ ಬೇರೆಯವರಿಂದ ಹಸ್ತಕ್ಷೇಪ ಹೆಚ್ಚಿದೆ. ಹೀಗಾಗಿ, ನಾನು ಬೆಂಗಳೂರಿನಲ್ಲಿ ಇರುತ್ತಿರಲಿಲ್ಲ. ಬೆಂಗಳೂರು ಬದಲು ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಮುನಿಸಿಕೊಂಡ ಶ್ರೀರಾಮುಲು ತಮ್ಮ ಸರ್ಕಾರಿ ನಿವಾಸದತ್ತ ತೆರಳಿದ್ದರು. ಆಗ ಸಿಎಂ ಖುದ್ದು ಶ್ರೀರಾಮುಲುರನ್ನು ಕರೆಸಿ, ಐವರು ಸಚಿವರನ್ನು ಕೂರಿಸಿ ಕ್ಲಾಸ್ ತೆಗೆದುಕೊಂಡರು. ನಿಮ್ಮ ಮಧ್ಯೆ ಸಮನ್ವಯತೆ ಕೊರತೆಯ ಲಾಭವನ್ನು ಕಾಂಗ್ರೆಸ್ ಪಡೆದು ಅಪಪ್ರಚಾರ ಮಾಡುತ್ತಿದೆ. ಹೀಗಾಗಿ, ಖುದ್ದು ಐವರು ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಆರೋಪಕ್ಕೆ ಸ್ಪಷ್ಟೀಕರಣ ನೀಡಿ ಎಂದು ತಾಕೀತು ಮಾಡಿದರು.
ಯಾವ ಇಲಾಖೆಗಳನ್ನು ಆರೋಪದ ವೇಳೆ ಪ್ರಸ್ತಾಪಿಸಿದ್ದಾರೋ ಆ ಸಚಿವರೆಲ್ಲರೂ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಸ್ಪಷ್ಟೀಕರಣ ನೀಡುವಂತೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಒಲ್ಲದ ಮನಸ್ಸಿನಲ್ಲೇ ಶ್ರೀರಾಮುಲು ಸುದ್ದಿಗೋಷ್ಠಿಗೆ ಏಕಾಂಗಿಯಾಗೇ ಆಗಮಿಸಿ, ಸೈಲೆಂಟಾಗಿ ಕೂತು ಎದ್ದು ಹೋದರು.