ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯರ ನಿವಾಸ ಕಾವೇರಿ ಮುಂದೆ ಇಂದು ಕತ್ತೆಗಳ ಹಿಂಡು ಹಾದುಹೋಗಿದ್ದು, ಇದು ಅವರಿಗೆ ಶುಭದಾಯಕ, ಮುಂಬರುವ ದಿನಗಳಲ್ಲಿ ಅವರಿಗೆ ಪಕ್ಷದಲ್ಲಿ ಉತ್ತಮ ಅವಕಾಶಗಳು ದೊರಕಲಿವೆ ಎಂದು ಅಭಿಮಾನಿಗಳು ಹಾಗೂ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದು. ಇದೇ ಸಂದರ್ಭ ಎರಡನೇ ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ಗೆ ಪ್ರತಿಪಕ್ಷದ ಸ್ಥಾನ ಲಭಿಸಲಿದೆ. ಈಗಾಗಲೇ ನಾಲ್ವರು ಪ್ರತಿಪಕ್ಷದ ನಾಯಕರಾಗಲು ಪೈಪೋಟಿ ನಡೆಸಿದ್ದು, ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬ ಪ್ರಶ್ನೆ ಮೂಡಿದೆ. ಈ ಸಂದರ್ಭದಲ್ಲಿಯೇ ಸಿದ್ದರಾಮಯ್ಯ ನಿವಾಸದ ಮುಂದೆ ಕಾಕತಾಳೀಯವಾಗಿ ಹಾದುಹೋದ ಕತ್ತೆಗಳ ಹಿಂಡು, ಅವರ ಅಭಿಮಾನಿಗಳು ಹಾಗೂ ಕೆಲ ಜ್ಯೋತಿಷಿಗಳಲ್ಲಿ ಇಂಥದೊಂದು ಅಭಿಪ್ರಾಯ ವ್ಯಕ್ತಪಡಿಸುವಂತೆ ಮಾಡಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಇದ್ದರೂ ಕೂಡ ಪ್ರತಿಪಕ್ಷದ ನಾಯಕರಾಗುವ ಇವರ ಅವಕಾಶಕ್ಕೆ ಸದ್ಯ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಹಾಗೂ ಮಾಜಿ ಸಚಿವರಾದ ಡಿ ಕೆ ಶಿವಕುಮಾರ್ ಹಾಗೂ ಹೆಚ್ ಕೆ ಪಾಟೀಲ್ ತೀವ್ರ ಸ್ಪರ್ಧೆ ಒಡ್ಡಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಇವರ ಆಪ್ತ ಶಾಸಕರು ಪಕ್ಷ ತ್ಯಜಿಸಿ ಬಿಜೆಪಿ ಪಾಳಯ ಸೇರುವ ಸೂಚನೆ ನೀಡಿರುವ ಕಾರಣ ಪ್ರತಿಪಕ್ಷದ ನಾಯಕ ಸ್ಥಾನ ಇವರಿಗೆ ತಪ್ಪುವುದಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಇವರ ನಿವಾಸದ ಎದುರು ಕತ್ತೆಗಳು ಕಾಣಿಸಿಕೊಂಡಿದ್ದು, ಸಿದ್ದರಾಮಯ್ಯರಿಗೆ ಶುಭದಾಯಕ ವಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಕತ್ತೆಗಳು ಯೋಗಾರಾಣಿಗಳು:
ಜ್ಯೋತಿಷ್ಯದಲ್ಲಿ ಕತ್ತೆಗಳಿಗಿದೆ ಯೋಗಾರಾಣಿಗಳು ಎಂಬ ಅನ್ವರ್ಥ ಹೆಸರಿದೆ. ಕತ್ತೆಗಳನ್ನ ಕಂಡರೆ ಲಕ್ಷ್ಮಿ ಒಲಿಯುತ್ತಾಳೆಂಬ ನಂಬಿಕೆಯಿದೆ. ಹೀಗಾಗಿ ಮಾಜಿ ಸಿಎಂ ಸಿದ್ದುಗೆ ಮುಂದೆ ಲಕ್ಷ್ಮೀ ಕಟಾಕ್ಷ ಒಲಿಯುತ್ತಾ ಎಂಬ ಕುತೂಹಲ ಮೂಡಿದೆ.