ಬೆಂಗಳೂರು: ಪ್ರತಿಭಟನೆಗೆ ಮಣಿಯದ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕೆಲಸಕ್ಕೆ ಗೈರಾಗಿ ನಾಳೆಯಿಂದ ಉಪವಾಸ ಸತ್ಯಾಗ್ರಹ ಮಾಡಲು ಸಾರಿಗೆ ನೌಕರರು ತಯಾರಿ ನಡೆಸಿದ್ದರೆ, ಇತ್ತ ಸರ್ಕಾರ ಮುಷ್ಕರ ಹತ್ತಿಕ್ಕಲು ಖಾಸಗಿ ಬಸ್ ಸೂತ್ರ ಹೆಣೆಯುತ್ತಿದೆ.
ಸಾರಿಗೆ ನೌಕರರು ಹೋರಾಟ ತೀವ್ರಗೊಳಿಸಲು ಮುಂದಾದ ಬೆನ್ನಲ್ಲೇ ಸರ್ಕಾರ ಖಾಸಗಿ ಬಸ್ಗಳನ್ನು ರಸ್ತೆಗಿಳಿಸಲು ಸಿದ್ಧವಾಗಿದ್ದು, ಖಾಸಗಿ ಬಸ್ ಮಾಲೀಕರಿಗೆ ಸರ್ಕಾರ ಬಂಪರ್ ಆಫರ್ ನೀಡುತ್ತಾ..! ಎನ್ನುವ ಪ್ರಶ್ನೆ ಮೂಡಿದೆ.
ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಕಾರಣ ಖಾಸಗಿ ಬಸ್ ಓಡಿಸಲು ಸರ್ಕಾರ ಮುಂದಾಗಿದೆ. ತಿಂಗಳಿಗೆ 18 ಸಾವಿರ ಸಂಬಳದಂತೆ ಮೂರು ತಿಂಗಳವರೆಗೆ 54 ಸಾವಿರ ರೂ. ವೇತನ ನೀಡಲು ಚಿಂತನೆ ನಡೆಸಿದೆ. ಹತ್ತು ದಿನಗಳಲ್ಲಿ ಸಾರಿಗೆ ನೌಕರರ ಮುಷ್ಕರ ನಿಂತರೂ ಸಹ ಭರವಸೆಯಂತೆ ಮೂರು ತಿಂಗಳ ಸಂಬಳ ಖಾಸಗಿ ಬಸ್ ಚಾಲಕರಿಗೆ ನೀಡಲು ಯೋಜನೆ ರೂಪಿಸಲಾಗಿದೆ.
ಓದಿ-ಸಾರಿಗೆ ಸಿಬ್ಬಂದಿ ನಿಯಂತ್ರಣಕ್ಕೆ ಸರ್ಕಾರದ ಬ್ರಹ್ಮಾಸ್ತ್ರ: ಇಲ್ಲಿದೆ 'ಎಸ್ಮಾ' ಕುರಿತ ಕಂಪ್ಲೀಟ್ ಡಿಟೈಲ್ಸ್...!
ಒಂದು ವೇಳೆ ಮೂರು ತಿಂಗಳವರೆಗೂ ಸಾರಿಗೆ ನೌಕರರ ಪ್ರತಿಭಟನೆ ಮುಗಿಯದೆ ಇದ್ದರೆ ಅವರನ್ನು ಕೆಲಸದಿಂದ ವಜಾಗೊಳಿಸಿ ಖಾಸಗಿ ಚಾಲಕರನ್ನೇ ನಿಗಮದ ಚಾಲಕರನ್ನಾಗಿ ನೇಮಿಸಲು ಸರ್ಕಾರ ತಯಾರಿ ನಡೆಸಿದೆ. ಇಂದು ರಾತ್ರಿ ಒಳಗೆ ಈ ಬಗ್ಗೆ ಅಂತಿಮ ರೂಪುರೇಷೆ ಸಿದ್ಧವಾಗಲಿದೆ ಎನ್ನಲಾಗುತ್ತಿದೆ.
ಈ ಕುರಿತು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಾಹಿತಿ ನೀಡಿದ್ದು, ಸರ್ಕಾರ ಇದುವರೆಗೂ ನಮ್ಮ ಜೊತೆ ಮಾತನಾಡಿಲ್ಲ. ಒಂದು ವೇಳೆ ಸರ್ಕಾರ ಮಾತುಕತೆಗೆ ಕರೆದರೆ ಬಸ್ ಓಡಿಸಲು ಸಿದ್ಧವಿದ್ದೇವೆ. ತಕ್ಷಣಕ್ಕೆ ನಾಳೆಯೇ ಬಸ್ ಓಡಿಸಲು ಸಾಧ್ಯ ಇಲ್ಲ. ಯಾಕೆಂದರೆ ನಮ್ಮ ಖಾಸಗಿ ಬಸ್ ಮಾಲೀಕರ ಜೊತೆ ಚರ್ಚೆ ಮಾಡಬೇಕು. ನಂತರ ಬಸ್ ಓಡಿಸಲು ರೆಡಿ ಆಗುತ್ತೇವೆ. ಆದ್ರೆ ನಮ್ಮದು ಕೆಲ ಬೇಡಿಕೆಗಳು ಇದ್ದು, ಅವುಗಳ ಬಗ್ಗೆ ಚರ್ಚಿಸಿ ನಂತರ ಬಸ್ ಓಡಿಸುವ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.