ಬೆಂಗಳೂರು: ಗೋಲಿಮಾರೋ ಎನ್ನುವ ಘೋಷಣೆ ತಡೆಯದೇ ಮೌನ ವಹಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಪ್ರಕರಣ ದಾಖಲು ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವರ ಸಮ್ಮುಖದಲ್ಲಿ ಗೋಲಿಮಾರೋ ಎನ್ನುವ ಘೋಷಣೆ ಮೊಳಗಿದೆ, ಘೋಷಣೆ ತಡೆಯದೆ, ಅದರ ಬಗ್ಗೆ ಮಾತನ್ನೂ ಆಡದೆ ಮೌನವಾಗಿರುವುದನ್ನು ನೋಡಿದರೆ ಗೃಹ ಸಚವರೇ ಗೋಲಿಮಾರೋ ಅನ್ನೋದಕ್ಕೆ ಬೆಂಬಲ ನೀಡಿದ್ದಾರೆ ಎನ್ನುವುದನ್ನು ತೋರುತ್ತಿದೆ. ಈ ನೆಲದ ಕಾನೂನಿನ ಪ್ರಕಾರ ಅಮಿತ್ ಶಾ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಮೂಲಕ ದೇಶದ ಗೃಹ ಸಚಿವರಿಗೂ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.