ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕಿನಿಂದ ಕಾಲಕಾಲಕ್ಕೆ ನಡೆಯಬೇಕಿದ್ದ ಶೈಕ್ಷಣಿಕ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ. ಅದರಲ್ಲೂ ಒಂದು ದೇಶದ ಅಭಿವೃದ್ಧಿಗೆ ಸಾಕ್ಷಿಯಾಗುವುದೇ ಅಲ್ಲಿನ ಆರೋಗ್ಯ ಹಾಗೂ ಶಿಕ್ಷಣ. ಹೀಗಿರುವಾಗ ಕೊರೊನಾ ಸೋಂಕು ಹರಡುವಿಕೆಯಿಂದ ಹೆಚ್ಚು ಹೊಡೆತಕ್ಕೆ ಒಳಗಾಗಿದ್ದು ಶೈಕ್ಷಣಿಕ ವ್ಯವಸ್ಥೆ.
ನಿಗದಿತ ಸಮಯಕ್ಕೆ ಶಾಲಾ-ಕಾಲೇಜು ಶುರುವಾಗದೆ, ಪರೀಕ್ಷೆಗಳು ನಡಯದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊರೊನಾ ಮಾರಕವಾಗಿದೆ. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಮುಖ್ಯ ಪರೀಕ್ಷೆಗಳು ಹೇಗೋ ನಡೆದು ಹೋಗಿವೆ. ನೋಡ ನೋಡುತ್ತಲೇ ಒಂದು ವರ್ಷದ ಶೈಕ್ಷಣಿಕ ಸಾಲು ಆನ್ಲೈನ್, ಟಿವಿ ಪಾಠ ಇಂತಹದರಲ್ಲೇ ಮುಗಿದಿದೆ.
ಸದ್ಯ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಕಾರಣಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಯು ರದ್ದಾಗಿದೆ. ಬದಲಿಗೆ ಎಸ್ಎಸ್ಎಲ್ಸಿ ಹಾಗೂ ಮೊದಲ ಪಿಯುಸಿ ಕಲಿಕೆಯ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಗ್ರೇಡ್ ನೀಡಿ ಪಾಸ್ ಮಾಡಲಾಗುತ್ತಿದೆ. ಹೀಗೆ, ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳ ತೇರ್ಗಡೆಯಿಂದ ಈ ವರ್ಷ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಹೆಚ್ಚಳವಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ನಾಲ್ಕು ಲಕ್ಷದಷ್ಟು ವಿದ್ಯಾರ್ಥಿಗಳು ಪಾಸ್ ಔಟ್ ಆಗಿ ಪದವಿ ಕಾಲೇಜು ಸೇರುತ್ತಿದ್ದರು. ಆದರೆ, ಈ ಬಾರಿ ಆರೂವರೆ ಲಕ್ಷ ವಿದ್ಯಾರ್ಥಿಗಳು ಸಹ ಮಾಸ್ ಪಾಸ್ ಆಗುತ್ತಿದ್ದಾರೆ.
ಹೀಗಾಗಿ, ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಡಿಗ್ರಿ ಕಾಲೇಜುಗಳ ವ್ಯವಸ್ಥೆ ಮಾಡಬೇಕಿದೆ. ಶೇ. 30ರಷ್ಟು ಹೆಚ್ಚುವರಿ ವಿದ್ಯಾರ್ಥಿಗಳ ಪಾಸ್ ಔಟ್ ಆಗುತ್ತಿದ್ದು, ಇವರ ವಿದ್ಯಾಭ್ಯಾಸಕ್ಕೆ ವಿವಿಧ ಕೋರ್ಸ್ಗಳನ್ನು ತರಲು ಈಗಾಗಲೇ ಉನ್ನತ ಶಿಕ್ಷಣ ಇಲಾಖೆ ಸಿದ್ಧತೆಗೆ ಸಭೆಗಳನ್ನ ಮಾಡಿಕೊಂಡಿದೆ. ಬಿಎ, ಬಿ.ಕಾಂ ಸೇರಿದಂತೆ ಹೆಚ್ಚು ಯಾವ ಕೋರ್ಸ್ಗೆ ಆಡ್ಮಿಷನ್ ಹೆಚ್ಚಾಗುತ್ತೋ, ಅಲ್ಲಿ ಸೀಟುಗಳ ಸಂಖ್ಯೆಯ ಹೆಚ್ಚಳಕ್ಕೂ ಚಿಂತನೆ ನಡೆದಿದೆ.
ಈ ಕುರಿತು ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತನಾಡಿ, ದ್ವಿತೀಯ ಪಿಯು ಪರೀಕ್ಷೆ ಇಲ್ಲದೇ ಎಲ್ಲರನ್ನು ಪಾಸ್ ಮಾಡುತ್ತಿರುವುದರಿಂದ ಎಲ್ಲರಿಗೂ ಪದವಿ ಪ್ರವೇಶಾತಿ ನೀಡಬೇಕಾಗುತ್ತದೆ. ಈಗಾಗಲೇ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಹಾಗೂ ಕೆಲವು ಅಟೋನಾಮಸ್ ಕಾಲೇಜುಗಳು ಅವರ ಮಾನದಂಡದ ಅಡಿಯಲ್ಲಿ ಆಡ್ಮಿಷನ್ ತೆಗೆದುಕೊಳ್ಳಬಹುದು. ಈ ವರ್ಷ ಹೆಚ್ಚುವರಿ ಫಲಿತಾಂಶ ಬರುವುದರಿಂದ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಕಲ್ಪಿಸುವುದು ಕಷ್ಟವಾಗಲಿದೆ. ಕಾರಣ ಅಂದಾಜು 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೆಚ್ಚುವರಿ ಆಗುವುದರಿಂದ ಕನಿಷ್ಠ ಅಂದರೂ ಒಂದು ಸಾವಿರ ಪದವಿ ಕಾಲೇಜು ಸ್ಥಾಪನೆ ಮಾಡಬೇಕಾಗುತ್ತೆ. 5ರಿಂದ 6 ಸಾವಿರ ಉಪನ್ಯಾಸಕರನ್ನ ನೇಮಕ ಮಾಡಿಕೊಳ್ಳಬೇಕಾಗುತ್ತೆ. ಇದು ನಿಜಕ್ಕೂ ಸರ್ಕಾರಕ್ಕೆ ಹೊರಯಾಗಲಿದ್ದು, ಹೆಚ್ಚಿನ ಗೊಂದಲ ಶುರುವಾಗಲಿದೆ ಎಂದರು.
ಪ್ರವೇಶಾತಿ ಹೆಚ್ಚಳದಿಂದ ಹೆಚ್ಚಲಿದ್ಯಾ ಆದಾಯ:
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗುವ ಹಿನ್ನೆಲೆ ಖಾಸಗಿ ಪದವಿ ಕಾಲೇಜುಗಳ ಆದಾಯವೂ ಹೆಚ್ಚಾಗುವ ನಿರೀಕ್ಷೆ ಇದೆ. ಬಿಎ, ಬಿ.ಕಾಂ, ಬಿಬಿಎಂ ಸೇರಿದಂತೆ ಇತರೆ ಕೋರ್ಸ್ಗಳ ಪ್ರವೇಶಾತಿ ಹೆಚ್ಚಾಗಲಿದ್ದು, ಕೊರೊನಾ ಕಾಲದಲ್ಲಿ ಆದಾಯವೂ ಹೆಚ್ಚಾಗುವ ನಿರೀಕ್ಷೆ ಇದೆ. ಪರೀಕ್ಷೆಯಿಲ್ಲದೇ ವಿದ್ಯಾರ್ಥಿಗಳನ್ನ ಪಾಸ್ ಮಾಡಿರುವ ಪರಿಣಾಮ ಪದವಿ ಕಾಲೇಜುಗಳಿಗೆ ಡಿಮ್ಯಾಂಡ್ ಹೆಚ್ಚಾಗಲಿದೆ. ಸ್ವಾಭಾವಿಕವಾಗಿ ಶುಲ್ಕವೂ ಹೆಚ್ಚಾಗಲಿದೆ ಅಂತ ಲೋಕೇಶ್ ತಾಳಿಕಟ್ಟೆ ತಿಳಿಸಿದರು. ಇತ್ತ ಶುಲ್ಕ ಹೆಚ್ಚಾದರೆ ಬಡ ವಿದ್ಯಾರ್ಥಿಗಳು, ಮಧ್ಯಮ ವರ್ಗದ ವಿದ್ಯಾರ್ಥಿಗಳು ದುಬಾರಿ ಶುಲ್ಕ ಭರಿಸಲು ಆಗೋದಿಲ್ಲ. ಹೀಗಾಗಿ, ಶೈಕ್ಷಣಿಕ ಬೆಳವಣಿಗೆ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಯಾವುದೇ ವಿಷಯವನ್ನ ನಿರ್ಧಾರ ಮಾಡುವುದು ದೊಡ್ಡದಲ್ಲ, ಆದರೆ ಅದಕ್ಕೆ ತಕ್ಕ ಅಗತ್ಯತ್ಯೆ ಪೂರೈಕೆ ಮಾಡುವುದು ಸವಾಲಿನ ಕೆಲಸ ಎಂದರು.
ಇದನ್ನೂ ಓದಿ: 12th ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ CBSE ಮಾನದಂಡ ಪ್ರಕಟ: ಜುಲೈ 31ರೊಳಗೆ ರಿಸಲ್ಟ್