ಬೆಂಗಳೂರು: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಬೌರಿಂಗ್ ಆಸ್ಪತ್ರೆಯಿಂದ ಮೂವರು ರೋಗಿಗಳು ಮತ್ತು ವಿಕ್ರಮ್ ಆಸ್ಪತ್ರೆಯಿಂದ ಒಬ್ಬ ಸೋಂಕಿತೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಲ್ಲಿ 35 ವರ್ಷದ ಸೋಂಕಿತ ವ್ಯಕ್ತಿ ಜೂನ್ 10 ರಂದು ಸಾವನ್ನಪ್ಪಿದ್ದು, ಇವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 52 ವರ್ಷದ ವ್ಯಕ್ತಿ, 69 ವರ್ಷದ ವೃದ್ಧ ಸೇರಿದಂತೆ 45 ವರ್ಷದ ಮಹಿಳೆ ಇಂದು ಕೊನೆಯುಸಿರೆಳೆದಿದ್ದಾರೆ.
ಈ ಮೂಲಕ ಬೆಂಗಳೂರಿನಲ್ಲಿ ಕೊರೊನಾ ವೈರಾಣುವಿನಿಂದ ಸಾವಿಗೀಡಾದವರ ಸಂಖ್ಯೆ 25ಕ್ಕೇರಿದೆ. ಜೂನ್ ತಿಂಗಳಲ್ಲಿ ನಗರದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲೂ ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ದಾಖಲಾದವರೇ ಸಾವನ್ನಪ್ಪಿರುವುದು ಗಮನಾರ್ಹ.
ವಯೋವೃದ್ಧರು ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರು ಆಸ್ಪತ್ರೆಗೆ ಬೇಗ ದಾಖಲಾಗುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ರೋಗದ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಆಪ್ತಮಿತ್ರ ಸಂಖ್ಯೆ 14410 ಕ್ಕೆ ಕರೆ ಮಾಡಲು ತಿಳಿಸಲಾಗಿದೆ.