ಬೆಂಗಳೂರು : ದೇಶದಲ್ಲಿ ಕೊರೊನಾ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಸರ್ಕಾರಗಳು ಸಮಸ್ಯೆ ಪರಿಹರಿಸುವ ಬದಲು ಸಮರ್ಥನೆ ನೀಡಲು ಮಾತ್ರ ಸೀಮಿತವಾಗಿವೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೋವಿಡ್ ಕೈಮೀರಿ ಹೋಗುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣ ಬಿಟ್ಟು ಆಚೆ ಬರುತ್ತಿಲ್ಲ. ಪ್ರಧಾನಿ ಮೋದಿ ತಮ್ಮ ದಂತಗೋಪುರ ಬಿಟ್ಟು ಹೊರಗಡೆ ಬರುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಸ್ಯೆ ಪರಿಹರಿಸುವ ಬದಲು ಕೇವಲ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿವೆ ಅಷ್ಟೇ.. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗುತ್ತಿಲ್ಲ, ರೋಗಿಗಳಿಗೆ ಸಕಾಲಕ್ಕೆ ಆ್ಯಂಬುಲೆನ್ಸ್ ಸಿಗುತ್ತಿಲ್ಲ. ತಪಾಸಣೆಗೆ ಒಳಗಾದವರ ಫಲಿತಾಂಶ ಮೂರು ದಿನ ಕಳೆದ್ರೂ ಬರುತ್ತಿಲ್ಲ. ಜನರ ಬಾಳು ನರಕ ಸದೃಶ್ಯವಾಗಿದೆ.
ಬಳ್ಳಾರಿಯಲ್ಲಿ ಮೃತರ ಅಂತ್ಯಸಂಸ್ಕಾರಕ್ಕೂ ಸೂಕ್ತ ವ್ಯವಸ್ಥೆ ಇಲ್ಲ. ಇಷ್ಟಾದ್ರೂ ಮುಖ್ಯಮಂತ್ರಿಗಳಾಗಲಿ ಅಥವಾ ಸಂಬಂಧಿಸಿದ ಸಚಿವರಾಗಲಿ ಈವರೆಗೂ ಯಾವುದೇ ಆಸ್ಪತ್ರೆಗೆ ಭೇಟಿ ಕೊಟ್ಟಿಲ್ಲ. ಕೇವಲ ಎಲ್ಲಿ ಲಂಚ ಸಿಗುತ್ತೆ ಅನ್ನೋದನ್ನ ಹುಡುಕುವ ಹಾಗೂ ಅದಕ್ಕಾಗಿ ಕಿತ್ತಾಡುವ ಕೆಲಸ ಮಾಡುತ್ತಿದ್ದಾರೆ. ಕಮಿಷನ್ ಪಡೆಯುವ ವಿಚಾರದಲ್ಲಿ ಪೈಪೋಟಿ ನಡೆಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಕಟೀಲ್ ವಿರುದ್ಧ ಆಕ್ರೋಶ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಗ್ಗೆ ಇಲ್ಲಸಲ್ಲದ ಮಾತನಾಡಿದ್ದಾರೆ. ಡಿಕೆಶಿಯವರನ್ನ ಆರಂಭ ಶೂರ ಎಂದು ಹೇಳಿದ್ದಾರೆ. ಆದರೆ, ವಸ್ತುಸ್ಥಿತಿ ಏನೆಂದ್ರೆ ಆರಂಭಶೂರತ್ವ ಏನಿದ್ರೂ ಅದು ಬಿಜೆಪಿಗೆ ಮಾತ್ರ. ಬಿಜೆಪಿಯವರು ಕೊಟ್ಟ ಯಾವ ಮಾತನ್ನು ಈಡೇರಿಸಿಲ್ಲ. ತಲೆಕೆಳಕೆ ಮಾಡಿಕೊಂಡು ಪ್ರಯತ್ನಿಸಿದ್ರೂ ನಿಮ್ಮಿಂದ ಕಾಂಗ್ರೆಸ್ ಮುಗಿಸಲು ಸಾಧ್ಯವಿಲ್ಲ. ನೀವು ಹಗಲುಗನಸು ಕಾಣುವುದನ್ನು ಬಿಟ್ಟು, ಕೊರೊನಾ ನಿಯಂತ್ರಣದಲ್ಲಿ ನಿಮ್ಮ ಕೊಡುಗೆ ಏನು ಅನ್ನೋದನ್ನು ತಿಳಿಸಿ ಎಂದರು.
ನಾವು ತರಕಾರಿ ಹಣ್ಣುಗಳನ್ನ ರೈತರಿಂದ ತೆಗೆದುಕೊಂಡು ಜನಸಾಮಾನ್ಯರಿಗೆ ತಲುಪಿಸಿದ್ದೇವೆ. ಆದರೆ, ನೀವು ಬೆಂಗಳೂರನ್ನ ಸ್ಮಶಾನ ಮಾಡಲು ಹೊರಟಿದ್ದೀರಿ. ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆ, ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯದ ಸಚಿವರು ಪಿಪಿಇ ಕಿಟ್ ಹಾಗೂ ಆ್ಯಂಬುಲೆನ್ಸ್ಗಳಲ್ಲಿ ಹಣ ಮಾಡುವುದಕ್ಕೆ ಹೊರಟಿದ್ದಾರೆ. ಶೇ.50ರಷ್ಟು ಬೆಡ್ಗಳು ಖಾಸಗಿ ಆಸ್ಪತ್ರೆಗಳಲ್ಲಿ ಸಿಗುತ್ತಿದೆ ಅಂತಾ ಸಚಿವ ಸುಧಾಕರ್ ಹೇಳುತ್ತಾರೆ. ಈಗ ಶೇ.15ರಷ್ಟು ಬೆಡ್ಗಳೂ ಸಿಗುತ್ತಿಲ್ಲ. ಈ ರೀತಿ ಸುಳ್ಳು ಹೇಳುವ ನಿಮಗೆ ಜನ ಮುಂದಿನ ದಿನಗಳಲ್ಲಿ ಎಚ್ಚರಿಕೆಯ ಪಾಠ ಕಲಿಸುತ್ತಾರೆ ಎಂದರು.
ಇನ್ನು, ಕೊರೊನಾ ವಿಚಾರದಲ್ಲಿ ಸರ್ಕಾರ ಸಾಧಿಸಿದ ಸಾಧನೆ ಶ್ವೇತಪತ್ರ ಹೊರಡಿಸಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನ ಕೇಳಿದ್ದರು. ಈ ಸಂಬಂಧ ಚರ್ಚೆಗೆ ವಿಶೇಷ ಅಧಿವೇಶನ ಕರೆಯಿರಿ ಎಂದು ಕೇಳಿದ್ದೆವು. ಆದರೆ, ಇದ್ಯಾವುದನ್ನು ಬಿಎಸ್ವೈ ಸರ್ಕಾರ ಮಾಡಿಲ್ಲ. ಯಡಿಯೂರಪ್ಪನವರಿಗೆ ತಾಕತ್ತಿದ್ದರೆ ರಾಜ್ಯದ ಸಚಿವರಿಂದ ಆಗಿರುವ ಹಗರಣವನ್ನ ಹೈಕೋರ್ಟ್ ನ್ಯಾಯಾಧೀಶರನ್ನ ಒಳಗೊಂಡ ಪೀಠಕ್ಕೆ ತನಿಖೆಗೆ ವಹಿಸಲಿ. ಜನರ ಪ್ರಾಣ ಉಳಿಸಬೇಕಾಗಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಕಾರ್ಯದಲ್ಲಿ ಸಂಪೂರ್ಣ ವಿಫಲವಾಗಿವೆ. ದೇಶದ ಗಡಿ ಉಳಿಸುವುದಕ್ಕೆ ಮೋದಿ ಕೈಯಲ್ಲಿ ಆಗಿಲ್ಲ. ಇದರಿಂದಾಗಿ ಆರಂಭ ಶೂರರು ಯಾರೇ ಇದ್ದರೂ ಅದು ಬಿಜೆಪಿಯಲ್ಲಿ ಮಾತ್ರ ಎಂದು ಕಿಡಿಕಾರಿದರು.