ಬೆಂಗಳೂರು: ಐಟಿ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡ ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ್ದ ಸಮನ್ಸ್‌ಗೆ ಮಧ್ಯಂತರ ರಕ್ಷಣೆಗೆ ಅವಕಾಶ ನೀಡುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಇದರಿಂದ ಡಿಕೆಶಿಗೆ ಮತ್ತಷ್ಟು ಬಂಧನ ಭೀತಿ ಎದುರಾಗಿದೆ.
ನಿನ್ನೆ ನೀಡಿದ ತೀರ್ಪನ್ನು ತಿದ್ದಲು ಸಾಧ್ಯವಿಲ್ಲ. ಅದರಲ್ಲಿರುವ ಕಾಗುಣಿತ ತಪ್ಪುಗಳನ್ನು ತಿದ್ದಬಹುದು. ಯಾವುದೇ ಕಾರಣಕ್ಕೂ ತೀರ್ಪನ್ನು ತಿದ್ದಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಇಂದು ಡಿಕೆಶಿ ವಿಚಾರಣೆಗೆ ಹಾಜರಾಗದಿದ್ದರೆ, ನಾಳೆ ಇಡಿ ಬಂಧಿಸಲಾಗುತ್ತದೆ ಎನ್ನಲಾಗಿದೆ.
ನಾಳೆ ಮೇಲ್ಮನವಿ ಸಲ್ಲಿಸಲು ಸೂಚಿಸಿದ ಹೈ ಕೋರ್ಟ್, ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ತಿಳಿಸಿದೆ. ಆದರೆ, ಡಿಕೆಶಿ ಪರ ವಕೀಲರು ಅದನ್ನು ನಿರಾಕರಿಸಿದ್ದಾರೆ. ಇದರಿಂದ ನಿರೀಕ್ಷಣಾ ಜಾಮೀನು ಸಿಗಲಿದೆ ಎಂಬ ಭರವಸೆ ಹೊಂದಿದ್ದ ಡಿಕೆಶಿಗೆ ಭಾರೀ ಹಿನ್ನಡೆಯಾಗಿದೆ. ಹೀಗಾಗಿ ಡಿಕೆಶಿ ಆಶಾವಾದ ಭಗ್ನಗೊಂಡಿದೆ.
ಮಧ್ಯಂತರ ರಕ್ಷಣೆ ನೀಡುವಂತೆ ಡಿಕೆಶಿ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿರುವುದರಿಂದ ಡಿ.ಕೆ.ಶಿವಕುಮಾರ್ ಮತ್ತು ಅವರ ಐವರು ಆಪ್ತರಿಗೆ ಬಂಧನ ಭೀತಿ ಎದುರಾಗಿದೆ.
ಡಿಕೆಶಿ ಪರ ವಕೀಲರ ಮನವಿಯನ್ನ ಹೈಕೋರ್ಟ್ ತಿರಸ್ಕರಿಸಿದೆ. ನಿನ್ನೆ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಹಾಗೂ ಇಡಿ ಬಂಧಿಸದಂತೆ ನಿರ್ದೇಶನ ನೀಡುವಂತೆ ಕೋರಿ ಡಿಕೆಶಿ ಪರ ವಕೀಲ ಬಿ ವಿ ಆಚಾರ್ಯ ಅರ್ಜಿ ಸಲ್ಲಿಸಿದ್ದರು.
ನಾಳೆಯಿಂದ ಮೂರು ದಿನಗಳ ಕಾಲ ರಜೆ ಇದೆ. ಹೀಗಾಗಿ ನಮಗೆ ರಕ್ಷಣೆ ಕೊಡಿ. ಡಿಕೆಶಿ ಅವರನ್ನು ಬಂಧಿಸದಂತೆ ಇಡಿಗೆ ಸೂಚಿಸುವಂತೆ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನು ವಕೀಲ ಬಿ.ವಿ ಆಚಾರ್ಯ ಅವರು ಕೋರಿದ್ದರು.
ನಿನ್ನೆಯ ತೀರ್ಪಿನ ಬಗ್ಗೆ ಈಗಾಗಲೇ ಅಂತರ್ಜಾಲದಲ್ಲಿ ಅಪ್‌ಲೋಡ್ ಆಗಿದೆ. ಆದರೆ, ನೀವು ಇಂದೇ ಮೇಲ್ಮನವಿ ಸಲ್ಲಿಸಿ ಎಂದು ನ್ಯಾ.ಅರವಿಂದ್ ಕುಮಾರ್ ಅವರು ಡಿಕೆಶಿ ಪರ ವಕೀಲರಿಗೆ ಸೂಚನೆ ನೀಡಿದ್ದಾರೆ. ಮೂರು ದಿನ ರಜೆ ಇರುವ ಹಿನ್ನೆಲೆಯಲ್ಲಿ ಮಧ್ಯಂತರ ರಕ್ಷಣೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದರು.
ವಿಚಾರಣೆ ಎಂದರೆ ಬಂಧನ ಅಲ್ಲ ಎಂದು ಜಾರಿ ನಿರ್ದೇಶನಾಲಯದ ಪರ ವಕೀಲರು ವಾದ ಮಂಡಿಸಿದ್ದರು ಎರಡೂ ಕಡೆ ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ಡಿಕೆಶಿ ಅವರ ಅರ್ಜಿಯನ್ನ ವಜಾಗೊಳಿಸಿದೆ.