ಬೆಂಗಳೂರು: ಡಿ ಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಉಂಟಾದ ಗಲಭೆ ಸಂದರ್ಭದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಮಾಜಿ ಕಾರ್ಪೊರೇಟರ್ ಜಾಕೀರ್ ಹುಸೇನ್ ಅನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜಾಕೀರ್ ಒಮ್ಮೆ ಮಾತ್ರ ವಿಚಾರಣೆಗೆ ಹಾಜರಾಗಿ ನಂತರ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದರು. ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಳೆದ ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದರು.
ಡಿಸಿಪಿ ರವಿ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ, ಇವರ ಪತ್ತೆಗಾಗಿ ಶೋಧ ಮುಂದುವರೆಸಲಾಗಿತ್ತು. ನಿನ್ನೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಜಾಕೀರ್ ಹುಸೇನ್ನನ್ನು ಪೊಲೀಸರು ಬಂಧಿಸಿದ್ದು, ಚಾಮರಾಜಪೇಟೆ ಕಚೇರಿಗೆ ಕರೆತಂದಿದ್ದಾರೆ. ಮಾಜಿ ಮೇಯರ್ ಸಂಪತ್ ರಾಜ್ ಜೊತೆ ಸೇರಿಕೊಂಡು ಜಾಕೀರ್ ಗಲಭೆ ಸೃಷ್ಟಿಸಲು ಸಾಥ್ ನೀಡಿದ್ದರು ಎನ್ನಲಾಗ್ತಿದೆ.
ಪುಲಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ರಾಜಕೀಯದಿಂದ ಕೆಳಗಿಳಿಸಿ, ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಜಾಕೀರ್ ಹುಸೇನ್ ಅಧಿಪತ್ಯ ಸಾಧಿಸಲು ಖತರ್ನಾಕ್ ಪ್ಲಾನ್ ಮಾಡಿದ್ದರು. ಹೀಗಾಗಿ ದೊಡ್ಡ ಮಟ್ಟದಲ್ಲಿ ಗಲಭೆ ನಡೆಯಲು ಇವರಿಬ್ಬರು ಕಾರಣರಾಗಿದ್ದಾರೆ ಎಂಬ ಆರೋಪವಿದೆ.