ಬೆಂಗಳೂರು: ನಾನೊಬ್ಬ ಪ್ರತಿಪಕ್ಷ ನಾಯಕ. ನಾನು ನೊಂದವರಿಗೆ ಸಾಂತ್ವನ ಹೇಳಲೂ ಅವಕಾಶ ಇಲ್ಲವೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಮಂಗಳೂರಿಗೆ ಹೊರಟಿದ್ದೆ. ನಮ್ಮ ವಿಮಾನಕ್ಕೆ ಅವಕಾಶ ಕೊಡಲಿಲ್ಲ. ಇಂದೂ ಕೂಡ ಅದಕ್ಕೆ ತಡೆ ನೀಡಿದ್ದಾರೆ. ಡಿ. 22ರವರೆಗೆ ರೈಲು, ಬಸ್ಸು, ಕಾರಿನಲ್ಲಿ ಮಂಗಳೂರಿಗೆ ಬರದಂತೆ ನನಗೆ ನೋಟಿಸ್ ನೀಡಿದ್ದಾರೆ. ಪ್ರತಿಪಕ್ಷ ಇರುವುದು ಏಕೆ? ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ನಾನು ಪ್ರತಿಪಕ್ಷ ನಾಯಕ. ಎಲ್ಲಿಗೆ ಬೇಕಾದರೂ ಭೇಟಿ ನೀಡಬಹುದು. ನನ್ನ ಹಕ್ಕನ್ನೇ ಹತ್ತಿಕ್ಕಿದ್ದಾರೆ. ಇದನ್ನ ಜನ ಯಾವತ್ತೂ ಸಹಿಸುವುದಿಲ್ಲ. ಸೋಮವಾರ ಹೋಗ್ತೇನೆ. ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವ ಬಗ್ಗೆ ನಿರ್ಧರಿಸುತ್ತೇನೆ ಎಂದರು.
ಇಬ್ಬರು ಗೋಲಿಬಾರ್ಗೆ ಮೃತರಾಗಿದ್ದಾರೆ. ಪೊಲೀಸರೇ ಗುಂಡು ಹೊಡೆದ್ರೂ ಸಾಯಲಿಲ್ಲ ಅಂತಾರೆ. ಇದೆಲ್ಲವನ್ನೂ ಗಮನಿಸಿದಾಗ ಏನು ಅರ್ಥ ಕೊಡುತ್ತದೆ. ಗೋಲಿಬಾರ್ ಮಾಡುವ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದರು.
ಕಾನೂನು ಸುವ್ಯವಸ್ಥೆಯನ್ನು ಸರಿ ದಾರಿಗೆ ತರಲು ಹಲವು ದಾರಿಗಳಿದ್ದವು. ಅವರ ತಪ್ಪು ಮುಚ್ಚಿಕೊಳ್ಳಲು ಅಲ್ಲಿಗೆ ಹೋಗಲು ನನಗೆ ಅವಕಾಶ ನೀಡಿಲ್ಲ. ಇವತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು ಹೋಗಿದ್ದಾರೆ. ಆಡಳಿತ ಪಕ್ಷದವರಿಗೆ ಪೊಲೀಸರು ಅವಕಾಶ ಕೊಟ್ಟಿದ್ಯಾಕೆ? ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದು ಸರ್ಕಾರದ ವಿರುದ್ಧ ಹರಿದಾಯ್ದರು.
ಲಾಠಿ ಚಾರ್ಜ್ ಮಾಡಿಸಿರಲಿಲ್ಲ: ನಾನು ಮುಖ್ಯಮಂತ್ರಿಯಾಗಿದ್ದಾಗ ಲಾಠಿ ಚಾರ್ಜ್ ಮಾಡಿಸಿರಲಿಲ್ಲ. ಕಾವೇರಿ ಗಲಾಟೆ ಸಂದರ್ಭದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದೆವು. ಅದೂ 24 ಗಂಟೆ ಮಾತ್ರ. ಅವರು ಪ್ರತಿಪಕ್ಷದಲ್ಲಿದ್ದಾಗ ಈ ರೀತಿಯ ನಿರ್ಬಂಧಗಳನ್ನು ಹೇರಿರಲಿಲ್ಲ. ಎಲ್ಲರಿಗೂ ಭೇಟಿಗೆ ಅವಕಾಶ ಕೊಟ್ಟಿದ್ದೆವು. ಕೇಂದ್ರ ಸಚಿವ ಸುರೇಶ್ ಅಂಗಡಿ ಗುಂಡು ಹಾರಿಸಲಿ ಅಂತಾರೆ. ಈ ಬಗ್ಗೆ ನಿಮ್ಮ ಕ್ರಮ ಏನು ಎಂದು ಪ್ರಶ್ನಿಸಿದರು.
ದೇಶದಲ್ಲಿ ನೂರಾರು ಕಾಡುವ ಸಮಸ್ಯೆಗಳಿವೆ. ಅವುಗಳ ಬಗ್ಗೆ ಬಿಜೆಪಿ ಮಾತನಾಡಲ್ಲ. ಪರಿಹರಿಸುವತ್ತ ಗಮನ ಕೊಟ್ಟಿಲ್ಲ. ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಕಾರಣ. ಅವರಿಬ್ಬರೇ ನೇರ ಹೊಣೆ ಹೊರಬೇಕು. ಯುಪಿಯಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಅಮಾಯಕರ ಬಲಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾತಂತ್ರ್ಯಕ್ಕಾಗಿ ಇವರು ಹೋರಾಡಿದವರಲ್ಲ. ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಪೊಲೀಸರೇ ಗೋಲಿಬಾರ್ ಮಾಡ್ತಾರೆ. ಮತ್ತೆ ಗೃಹ ಸಚಿವರು ಇರೋದು ಯಾಕೆ. ಸದನದಲ್ಲಿ ಉತ್ತರ ಕೊಡೋದು ಪೊಲೀಸರಾ? ಸಚಿವರೇ ಸದನದಲ್ಲಿ ಉತ್ತರ ಕೊಡಬೇಕು. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದ ಸಮಿತಿಯೇ ಆಗಬೇಕು ಎಂದು ಒತ್ತಾಯಿಸಿದರು.
ಅನಗತ್ಯವಾಗಿ 144 ಹೇರಿಕೆ: 144 ಸೆಕ್ಷನ್ ಜಾರಿ ಹಾಕಬೇಕಾದ ಅಗತ್ಯವಿರಲಿಲ್ಲ. ತುಮಕೂರಿನಲ್ಲಿ ಏನಾದ್ರೂ ಗಲಾಟೆಯಾಗ್ತಿದೆಯೇ? ಅಲ್ಲೇಕೆ 144 ಸೆಕ್ಷನ್ ಹಾಕಿದ್ದಾರೆ. ಕೊಪ್ಪಳ, ಬೀದರ್ನಲ್ಲಿ ಪ್ರತಿಭಟನೆ ನಡೆಯುತ್ತಿದ್ಯಾ? ಅಲ್ಲೂ 144 ಸೆಕ್ಷನ್ ಜಾರಿ ಅಂದ್ರೆ ನಾಚಿಕೆಯಾಗಲ್ವೇ ಎಂದರು. ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಮಾತನಾಡಿ, ರಾಜೀನಾಮೆ ಇನ್ನೂ ಅಂಗೀಕರಿಸಿಲ್ಲ. ಅದಿನ್ನೂ ಮುಂದುವರೆಯುತ್ತಿದೆ. ಅದನ್ನ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸ್ಥಾನದಲ್ಲಿ ಮುಂದುವರಿಯುವ ಸುಳಿವು ನೀಡಿದರು.