ಬೆಂಗಳೂರು : ಕಾಂಗ್ರೆಸ್ ಸದಸ್ಯರ ಸಭಾತ್ಯಾಗ ಬಳಿಕ ವಿಧಾನಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಸದನದಲ್ಲಿ ಬೆಳಗ್ಗೆಯಿಂದಲೂ ನಡೆಯುತ್ತಿರುವುದನ್ನು ಮೌನವಾಗಿ ನೋಡಿದ್ದೇನೆ. ಅಧಿಕಾರ ಶಾಶ್ವತ ಅಲ್ಲ. ದೇಶಕ್ಕೆ ಹಲವರು ಕೊಡುಗೆ ಕೊಟ್ಟಿದ್ದಾರೆ. ಅವರ ಬಗ್ಗೆ ಮಾತಾಡುವ ನೈತಿಕ ಹಕ್ಕು ಇದೆಯೇ ಎಂಬುದನ್ನು ನೋಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮನಮೋಹನ್ ಸಿಂಗ್ ದೇಶಕ್ಕೆ ಏನು ಕೊಡುಗೆ ಕೊಟ್ಟರೆಂದು ಕೇಳಿದ್ದರು. ಮನಮೋಹನ ಸಿಂಗ್ ಅವರ ಬಗ್ಗೆ ಲಘುವಾಗಿ ಮಾತಾಡೋದು ಸದನದಲ್ಲಿ ಸರಿಯಲ್ಲ. ಕಾಂಗ್ರೆಸ್ನವರಿಗೆ ಇದರ ಬಗ್ಗೆ ಮಾತಾಡಕ್ಕೆ ಬರಲಿಲ್ಲ. ಮನಮೋಹನ್ ಸಿಂಗ್ ಆರ್ಥಿಕ ಸುಧಾರಣೆಗಳ ಕೊಡುಗೆ ಬಗ್ಗೆ ನೀವು ಆರಂಭದಲ್ಲಿ ಮಾತಾಡಿದ್ರಿ. ನಂತರ ನೀವೂ ಕೂಗಾಡಿದ್ರಿ. ನರೇಗಾ ಯೋಜನೆ ಕೊಟ್ಟಿದ್ದು ಮನನೋಹನ ಸಿಂಗ್ ಅವರು. ಈ ಯೋಜನೆಯಿಂದ ತುಂಬಾ ಜನ ಬದುಕುತ್ತಿದ್ದಾರೆ ಎಂದರು.
ಬೆಲೆ ಏರಿಕೆ ಬಗ್ಗೆ ನಾನು ಚರ್ಚಿಸೋಕೆ ಹೋಗಲ್ಲ. ಸದನದ ಗೌರವ ಕಾಪಾಡಬೇಕು. ಆಧಾರ್ ಯೋಜನೆ ತಂದಿದ್ದು ಮನಮೋಹನ ಸಿಂಗ್. ಆಧಾರ್ ಬಗ್ಗೆ ಆರಂಭದಲ್ಲಿ ಬಿಜೆಪಿ ವಿರೋಧ ಮಾಡಿತು. ನಂತರ ಒಪ್ಪಿಕೊಂಡಿತು. ಜಿಎಸ್ಟಿ ತರಲು ಮುಂದಾಗಿದ್ದು ಮೊದಲು ಮನಮೋಹನ ಸಿಂಗ್ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ನಮಗೆ ಗೌರವ ಇದೆ. ಮೋದಿ ಹತ್ತಿರಕ್ಕೂ ನೀವು ಹೋಗಕ್ಕಾಗಲ್ಲ ಅಂತ ಸಿಎಂ ಹೇಳಿದ್ರು. ಮೊನ್ನೆ ನಾನು ಸರ್ಕಾರದ ಪರವಾಗಿ ಮಾತಾಡಿದೆ ಅಂತ ಅಂದ್ರು. ಬಿಜೆಪಿ ಪರ ಬ್ಯಾಟಿಂಗ್ ಮಾಡಿದೆ ಎಂದಿದ್ದಾರೆ ಅಂದರು.
ನಾನು ಮನಮೋಹನ್ ಸಿಂಗ್ ಅವರ ಬಗ್ಗೆ ಹಗುರವಾಗಿ ಮಾತಾಡಿಲ್ಲ. ಅವರು ಆರ್ಥಿಕ ತಜ್ಞರಾಗಿ ಕೆಲವು ದೇಶದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಕಟು ಸತ್ಯಗಳನ್ನು ಒಪ್ಪಿಕೊಳ್ತಿದ್ರು. ರಾಜಕಾರಣಿಗಳು, ಈ ರೀತಿ ಕಟು ಸತ್ಯಗಳನ್ನ ಒಪ್ಪಿಕೊಳ್ಳುವುದು ಅಪರೂಪ. ಮನಮೋಹನ್ ಸಿಂಗ್ ಅವರಿಗೆ ಆ ಗುಣ ಇತ್ತು ಎಂದರು.
ಕೋವಿಡ್ನಿಂದ ಸತ್ತವರಿಗೆ ಒಂದು ಲಕ್ಷ ಕೊಡುತ್ತೇವೆಂದು ಯಡಿಯೂರಪ್ಪ ಘೋಷಿಸಿದರು. ಅದಕ್ಕಿನ್ನೂ ಗೈಡ್ಲೈನ್ಸ್ ರೂಪಿಸಿಲ್ಲ. ಒಬ್ಬರಿಗೂ ಹಣ ಹೋಗಿಲ್ಲ ಎಂದು ಆರೋಪಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಆರ್. ಅಶೋಕ್, ನಾವು ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರವೂ ಇದೇ ಯೋಜನೆ ಘೋಷಿಸಿದೆ. ಎಲ್ಲರಿಗೂ ಹಣ ಸಿಗುತ್ತದೆ ಎಂದರು.
ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿಯು ಕುತಂತ್ರದಿಂದ ಕೂಡಿದೆ : ಎನ್‌ಇಪಿ ವಿರುದ್ಧ ಬಿ ಕೆ ಹರಿಪ್ರಸಾದ್ ಕಿಡಿ