ಆನೇಕಲ್: ಬನ್ನೇರುಘಟ್ಟ ರಸ್ತೆಯ ಹುಳಿಮಾವು ಕೆರೆಯಲ್ಲಿ ಜೊಂಡು ಬೆಳೆದು ಮೀನುಗಾರಿಕೆಗೆ ಅಡ್ಡಿಯಾಗಿತ್ತು. ಗ್ರಾಮದ ಶ್ರೀ ಗಂಗಾ ಮೀನುಗಾರರ ಸಹಕಾರ ಸಂಘವು ಕೆರೆ ಜೊಂಡು ತೆಗೆಯಲು ಮುಂದಾಗಿದೆ.
ಬಿಬಿಎಂಪಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದು ವಿನಂತಿಸಿದರೂ ಅಧಿಕಾರಿಗಳು ಸ್ಪಂದಿಸದೇ ಇರುವುದರಿಂದ ಸಂಘದ ವತಿಯಿಂದಲೇ ಜೊಂಡು ತೆಗೆಯಲು ತೀರ್ಮಾನಿಸಿದ್ದಾರೆ. ಕೆರೆ ಪೂರ್ತಿ ಜೊಂಡಿನಿಂದ ತುಂಬಿ ಹೋಗಿತ್ತು. ಇದರಿಂದ ಮೀನುಗಾರಿಕೆಗೆ ಅಡ್ಡಿಯಾಗುವುದರ ಜತೆಗೆ ಸೊಳ್ಳೆಗಳ ಹಾವಳಿ ಹಾಗೂ ದುರ್ನಾತ ಬೀರುತ್ತಿತ್ತು. ಹೀಗಾಗಿ ಇಡೀ ಕೆರೆಯ ಜೊಂಡನ್ನು ತೆಗೆದು ಸ್ವಚ್ಛ ಮಾಡಲು ಮೀನುಗಾರರ ಸಂಘದ ಸದಸ್ಯರು ತೀರ್ಮಾನಿಸಿದ್ದಾರೆ.
ಇಪ್ಪತ್ತು ವರ್ಷಗಳಿಂದಲೂ ಈ ಕೆರೆಯಲ್ಲಿ ಮೀನುಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಅನೇಕರಿಗೆ ಉದ್ಯೋಗ ಸಿಕ್ಕಿದೆ. ಕಡಿಮೆ ದರದಲ್ಲಿ ಮೀನು ಮಾರಾಟ ಮಾಡಲಾಗುತ್ತಿತ್ತು. ಆದರೆ ಕೆರೆಯಲ್ಲಿ ಜೊಂಡು ಬೆಳೆದಿದ್ದರಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು.
ಸೋಮವಾರ ಕೆರೆ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಮೀನುಗಾರಿಕೆ ಇಲಾಖೆ ಬೆಂಗಳೂರು ನಗರ ಜಿಲ್ಲಾ ಸಹಾಯಕ ನಿರ್ದೇಶಕ ಕುಮಾರಸ್ವಾಮಿ ಮಾತನಾಡಿ, ಕೆರೆಗಳಿಗೆ ಕೊಳಚೆ ನೀರು ಸೇರುವುದರಿಂದಲೇ ಜೊಂಡು ಬೆಳೆಯುತ್ತದೆ. ಕೆರೆಯಲ್ಲಿ ಮೀನು ಇದ್ದಲ್ಲಿ ನೀರು ಸ್ವಚ್ಛವಾಗಿರುತ್ತದೆ. ಮೀನುಗಾರರ ಸಂಘವೇ ಸ್ವಚ್ಛತೆಗೆ ಮುಂದಾಗಿರುವುದು ನಮಗೂ ಖುಷಿ ತಂದಿದೆ. ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದರು.