ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಕೆಲ ನಟ-ನಟಿಯರ ಜೊತೆಗೆ ಸಾಕಷ್ಟು ಸುದ್ದಿಯಲ್ಲಿದ್ದ ಹೆಸರು ಪ್ರಶಾಂತ್ ಸಂಬರ್ಗಿ. ಸಿನಿಮಾಗಳ ವಿತರಣೆ ಮಾಡಿರುವ, ಡಬ್ಬಿಂಗ್ ಸಿನಿಮಾಗಳನ್ನು ಬಿಡುಗಡೆ ಮಾಡಿರುವ, ಸ್ಟಾರ್ ನಟರುಗಳ ಜಾಹೀರಾತು ಮಾಡಿರುವ ಪ್ರಶಾಂತ್ ಸಂಬರ್ಗಿ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ತಮ್ಮ ಹೇಳಿಕೆಗಳ ಮೂಲಕ ಸಾಕಷ್ಟು ಸಂಚಲನ ಸೃಷ್ಟಿಸಿದ್ದರು.
ಚಿರಂಜೀವಿ ಸರ್ಜಾ ಸಾವಿಗೆ ಡ್ರಗ್ಸ್ ಕಾರಣ ಎಂಬ ಆರೋಪವನ್ನು ನಿರಾಕರಿಸುತ್ತಾ, 'ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಮಂದಿ ಡ್ರಗ್ಸ್ ವ್ಯಸನಿಗಳು ಇದ್ದಾರೆ' ಎನ್ನುವ ಮೂಲಕ ಚಂದನವನದ ಡ್ರಗ್ಸ್ ಪ್ರಕರಣದ ಬಗ್ಗೆ ಮಾತನಾಡಲು ಆರಂಭಿಸಿದ ಪ್ರಶಾಂತ್ ಸಂಬರ್ಗಿ ಆ ನಂತರ ರಾಗಿಣಿ, ಸಂಜನಾ ಗಲ್ರಾನಿ ಇನ್ನೂ ಹಲವಾರು ಮಂದಿಯ ವಿರುದ್ಧ ಪುಂಖಾನುಪುಂಖವಾಗಿ ಟ್ವೀಟ್‌ಗಳನ್ನು ಮಾಡಿ ಹಲವರು ನಟ-ನಟಿಯರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ನಾಯಕರನ್ನು, ಸಿನಿಮಾ ನಟ-ನಟಿಯರನ್ನು, ಅನ್ಯ ಧರ್ಮೀಯರನ್ನು ಗುರಿಯಾಗಿರಿಸಿಕೊಂಡು 'ಟ್ರೋಲ್' ಮಾಡುತ್ತಿರುವ ಪ್ರಶಾಂತ್ ಸಂಬರ್ಗಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ವಿಜಯ್ ಆನಂದ್ ಎಂಬುವರು ದೂರು ದಾಖಲಿಸಿದ್ದಾರೆ.
ಕೆಟ್ಟ ಪದಗಳನ್ನು ಬಳಸಿ, ಸುಳ್ಳು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಹಾಗೂ ತಾನೇ ಸೃಷ್ಟಿಸಿರುವ ಭಾವಚಿತ್ರಗಳನ್ನು ಕೆಟ್ಟ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಸಾಮರಸ್ಯ ಕೆಡಿಸುತ್ತಿರುವ ಆರೋಪವನ್ನು ಪ್ರಶಾಂತ್ ಸಂಬರ್ಗಿ ಮೇಲೆ ಕಾಂಗ್ರೆಸ್ ಹೊರಿಸಿದ್ದು, ಅವರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಬೆಂಗಳೂರಿನ ಸೌತ್ ಸಿ.ಇ.ಎನ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರ ವಿರುದ್ಧ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆಟ್ಟ ಪದ ಬಳಸಿ, ಪ್ರಾಣಿಗಳಿಗೆ ಕಾಂಗ್ರೆಸ್ ಪಕ್ಷದ ಮುಖಂಡರನ್ನ ಹೋಲಿಕೆ ಮಾಡಿದ್ದಾರೆಂದು ದೂರಿದ್ದಾರೆ.