ಬೆಂಗಳೂರು: ಅಧಿಕ ಬಡ್ಡಿ ನೀಡಿಲ್ಲವೆಂದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯ ತೇಜೋವಧೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಂಗಿ ವಿರುದ್ಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೆಸ್ಟ್ ಆಫ್ ಕಾರ್ಡ್ ರೋಡ್ ನಿವಾಸಿ ವೈ.ಕೆ.ದೇವನಾಥ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಶಾಂತ್ ಸಂಬರಂಗಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಶಾಂತ್ ಬಳಿ ದೇವನಾಥ್ ಸಾಲ ಪಡೆದುಕೊಂಡಿದ್ದರು. ಸಾಲದ ಭದ್ರತೆಗಾಗಿ ಆಸ್ತಿ ಪತ್ರಗಳನ್ನು ಅವರು ಅಡವಿಟ್ಟಿದ್ದರು. ಸಾಲ ಹಾಗೂ ಬಡ್ಡಿಸಮೇತ ಹಣ ಪಾವತಿಸಿದ್ದರೂ ಪ್ರಶಾಂತ್ ಆಸ್ತಿ ದಾಖಲಾತಿ ವಾಪಸ್ ನೀಡದೆ ಸತಾಯಿಸುತ್ತಿದ್ದರಂತೆ.
ಓದಿ: ಚುನಾವಣೆಗೂ ಮುನ್ನವೇ ಮುರಿದು ಬೀಳುತ್ತಾ ಬಿಜೆಪಿಯೊಂದಿಗಿನ ಮೈತ್ರಿ..?: ಎಐಎಡಿಎಂಕೆ ಹೇಳೋದೇನು?
ಅಲ್ಲದೆ, ಶೇ.10ರಷ್ಟು ಬಡ್ಡಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಬಡ್ಡಿ ಕೊಡದೆ ಇದ್ದಾಗ ನನ್ನ ವ್ಯಕ್ತಿತ್ವ ತೇಜೋವಧೆ ಮಾಡಲು ಪರಿವರ್ತನೆ ಎಂಬ ವಾಟ್ಸಾಪ್ ಗ್ರೂಪ್ನಲ್ಲಿ ನನ್ನ ವಿರುದ್ಧ ಅವಹೇಳನಕಾರಿ ಸಂದೇಶ ಪ್ರಕಟಿಸಿದ್ದಾರೆ. ಹಾಗೂ ಸಿಸಿಬಿಯಲ್ಲಿ ಕೇಸ್ ದಾಖಲಿಸಿ ನನ್ನನ್ನು ಮೋಸಗಾರ ಎಂಬಂತೆ ಪ್ರತಿಬಿಂಬಿಸಿದ್ದಾರೆ. ಇದರಿಂದ ನನ್ನ ಗೌರವ ಹಾಳು ಮಾಡಿ ವ್ಯವಹಾರದಲ್ಲಿ ನಷ್ಟ ಉಂಟಾಗುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ದೇವನಾಥ್ ಆರೋಪಿಸಿದ್ದಾರೆ.