ಬೆಂಗಳೂರು : ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಗರದ ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ಪರ್ಯಾಯ ಮಾರ್ಗ ಹುಡುಕಬೇಕು ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಳ್ಳಾರಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳದಿರುವುದನ್ನು ಪ್ರಶ್ನಿಸಿ ನಗರದ ಸಮರ್ಪಣಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಸಿಜೆ ಎಸ್ ಸಿ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರಿ ವಕೀಲರು ಹಾಜರಾಗಿ, ನಗರದ ಬಳ್ಳಾರಿ ರಸ್ತೆ ಅಗಲೀಕರಣ ಹಿನ್ನೆಲೆ ರಾಜಮನೆತದವರಿಗೆ ಟಿಡಿಆರ್ ನೀಡುವ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಅದನ್ನು ಮರು ಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದ್ದು, ಅದು ವಿಚಾರಣೆಗೆ ಬಾಕಿಯಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರಮನೆ ರಸ್ತೆಯನ್ನು ನಾವು ಗಮನಿಸಿದ್ದೇವೆ. ಅದೇ ಹಾದಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬೇಕಾಗುತ್ತದೆ. ಹೆಚ್ಚು ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಅದನ್ನು ತಪ್ಪಿಸಲು ರಾಜ್ಯ ಸರ್ಕಾರ ಪರ್ಯಾಯ ಮಾರ್ಗ ಹುಡುಕಬೇಕು ಎಂದಿತು.
ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದೊಂದೇ ಆಗಿದೆ. ನಾನು ಸಹ ಆಗಾಗ್ಗೆ ವಿಮಾನ ನಿಲ್ದಾಣಕ್ಕೆ ಹೊಗುತ್ತಿರುತ್ತೇನೆ. ಈ ಮಾರ್ಗದಲ್ಲಿ ಸದಾ ಸಂಚಾರ ದಟ್ಟಣೆ ಹೆಚ್ಚಿರುತ್ತದೆ.
ಅದಕ್ಕಾಗಿಯೇ ರಸ್ತೆ ಅಗಲೀಕರಣ ಮಾಡುವ ಅಗತ್ಯವಿದೆ ಎಂದು ತಿಳಿಸಿದರು. ಅಂತಿಮವಾಗಿ ಸುಪ್ರೀಂಕೋರ್ಟ್ನಲ್ಲಿ ಮರು ಪರಿಶೀಲನಾ ಅರ್ಜಿ ಬಾಕಿಯಿರುವ ಕಾರಣ ಈ ಅರ್ಜಿಯನ್ನು ಮುಂದೂಡಲಾಗುತ್ತಿದೆ ಎಂದು ತಿಳಿಸಿ, ವಿಚಾರಣೆ ಮುಂದೂಡಿತು.