ಬೆಂಗಳೂರು : ಲಾಕ್‌ಡೌನ್ ವೇಳೆ ನಗರದಲ್ಲಿ ಏರಿಕೆಯಾಗಿದ್ದ ಕೌಟುಂಬಿಕ ಕಲಹಗಳ ಪ್ರಮಾಣ ಅನ್ಲಾಕ್ನಲ್ಲಿ ಕಡಿಮೆಯಾಗಿವೆ. ಲಾಕ್‌ಡೌನ್ ತೆರವು, ನಗರದಲ್ಲಿ ಸಾಮೂಹಿಕ ವಲಸೆ ಸೇರಿ ವಿವಿಧ ಕಾರಣಗಳಿಂದಾಗಿ ದೌರ್ಜನ್ಯ ಪ್ರಮಾಣ ಇಳಿಕೆಯಾಗಿದೆ.
ಸೋಂಕು ಹರಡುವಿಕೆ ಹೆಚ್ಚಾದ ಹಿನ್ನೆಲೆ ಮಾರ್ಚ್ 25ರಿಂದ ಲಾಕ್‌ಡೌನ್ ಜಾರಿಯಾಗಿತ್ತು. ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು, ಉದ್ಯಮಿಗಳು ಸೇರಿ ಎಲ್ಲಾ ವರ್ಗದ ಸಮುದಾಯದ ಉದ್ಯೋಗಿಗಳು ಅನಿವಾರ್ಯವಾಗಿ ಮನೆಯಲ್ಲೇ ಕೂರುವಂತಾಗಿತ್ತು. ಈ ವೇಳೆ ಗಂಡ-ಹೆಂಡತಿ ಜಗಳ, ಅತ್ತೆ-ಸೊಸೆ ಗಲಾಟೆ, ಲೈಂಗಿಕ ಶೋಷಣೆ ಸೇರಿ ಸಣ್ಣಪುಟ್ಟ ಕಾರಣಗಳಿಗಾಗಿ ಕೌಟುಂಬಿಕ ದೌರ್ಜನ್ಯ ಪ್ರಮಾಣ ಹೆಚ್ಚಾಗಿತ್ತು.
ಕಳೆದ ಏಪ್ರಿಲ್‌ನಲ್ಲಿ 418 ಪ್ರಕರಣ ವರದಿಯಾಗಿವೆ. ಮೇ ತಿಂಗಳಲ್ಲಿ 803 ಕೇಸ್ ದಾಖಲಾದ್ರೆ, ಜೂನ್‌ನಲ್ಲಿ 1014 ಪ್ರಕರಣ ದಾಖಲಾಗಿದ್ದವು. ಆದರೆ, ಅನ್ಲಾಕ್ ಜಾರಿಯಾದ ಬಳಿಕ ದೌರ್ಜನ್ಯ ಪ್ರಮಾಣ ಕಡಿಮೆಯಾಗಿದೆ. ಲಾಕ್‌ಡೌನ್ ವೇಳೆ ಯಾರೂ ಹೊರಗಡೆ ಬರದ ಪರಿಣಾಮ ಕೌಟುಂಬಿಕ ಶೋಷಣೆ ಹೆಚ್ಚಾಗಿರುವುದು ಕಂಡು ಬಂದಿತ್ತು. ಅನ್ಲಾಕ್ ಜಾರಿಯಾದ ಬಳಿಕ ನಗರದ ಜನರು ಕುಟುಂಬ ಸಮೇತ ಅವರವರ ಊರಿಗೆ ತೆರಳಿದ್ದರಿಂದ ಹೇಳಿಕೊಳ್ಳುವ ಶೋಷಣೆ ನಡೆದಿಲ್ಲ ಎಂಬುದು ವನಿತಾ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ರಾಣಿಶೆಟ್ಟಿ ಅಭಿಪ್ರಾಯ.
ಸೈಬರ್ ಕ್ರೈಂ ಹೆಚ್ಚಳ : ಅನ್ಲಾಕ್ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ ಕಡಿಮೆಯಾಗುತ್ತಿದ್ದಂತೆ ಸೈಬರ್ ಕ್ರೈಂ ಹೆಚ್ಚಾಗಿದೆ. ಊಟದಿಂದ ಶಿಕ್ಷಣದವರೆಗೂ ಎಲ್ಲವೂ ಆನ್ಲೈನ್ ಮಯವಾಗಿದೆ. ಟೈಂಪಾಸ್‌ಗಾಗಿ ಅಪರಿಚಿತ ಮಹಿಳೆಯರಿಗೆ ಚಾಟ್ ಮಾಡಿ, ಅಶ್ಲೀಲ ಫೋಟೋ, ವಿಡಿಯೋ ರವಾನಿಸಿ ದೌರ್ಜನ್ಯ, ಹಳೆ ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್, ಅನೈತಿಕ ಸಂಬಂಧ ಸೇರಿ ತರಹೇವಾರಿ ರೀತಿ ದೌರ್ಜನ್ಯ ಪ್ರಮಾಣ ಅಧಿಕವಾಗಿದೆ. ಏಪ್ರಿಲ್‌ನಲ್ಲಿ 19 ಕೇಸ್ ದಾಖಲಾದ್ರೆ ಅನುಕ್ರಮವಾಗಿ ಮೇ ಹಾಗೂ ಜೂನ್‌ನಲ್ಲಿ 26 ಹಾಗೂ 29 ಪ್ರಕರಣ ದಾಖಲಾಗಿವೆ. ಜುಲೈನಲ್ಲಿ 40ಕ್ಕಿಂತ ಸೈಬರ್ ಕ್ರೈಂ ಪ್ರಕರಣ ದಾಖಲಾಗಿವೆ.
ನೈಟ್ ಶಿಫ್ಟ್ ಕಾರ್ಯಾರಂಭ : ಏರಿಳಿತವಾಗುವ ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ಪೊಲೀಸ್ ಕಮಿಷನರ್ ಕಚೇರಿಯಲ್ಲಿರುವ ಪರಿಹಾರ ಸಹಾಯವಾಣಿ ಕೇಂದ್ರ ಕೆಲಸ ಮಾಡುತ್ತಿದೆ. ಲೈಂಗಿಕ ಶೋಷಣೆ, ಗಂಡ-ಹೆಂಡತಿ ಮುನಿಸು, ವರದಕ್ಷಿಣೆ, ಮಕ್ಕಳನ್ನು ಸರಿಯಾಗಿ ಪಾಲನೆ ಮಾಡದಿರುವುದು, ಕುಡಿದು ಬಂದು ಗಲಾಟೆ ಸೇರಿ ವಿವಿಧ ರೀತಿಯ ಪ್ರಕರಣ ವರದಿಯಾಗುತ್ತಿವೆ.
ಕೌನ್ಸಿಲಿಂಗ್ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪರಿಹಾರ ಸಹಾಯವಾಣಿ ಕೇಂದ್ರವು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದೆ. ಕೋವಿಡ್ ನಡುವೆಯೂ ಮಹಿಳೆಯರ ಹಾಗೂ ಮಕ್ಕಳ ಮೇಲೆ ರಾತ್ರಿ ವೇಳೆ ನಡೆಯುವಂತಹ ದೌರ್ಜನ್ಯ ಹೆಚ್ಚಾದ ಹಿನ್ನೆಲೆ ಶೋಷಣೆಗೆ ಒಳಗಾದವರು 080 22943225 ಸಂಖ್ಯೆಗೆ ಕರೆ ಮಾಡುವ ಪ್ರಮಾಣ ಹೆಚ್ಚಾಗಿತ್ತು.