ಜೈಪುರ(ರಾಜಸ್ಥಾನ): 'ವಿಶ್ವ ಸ್ಮರಣಾರ್ಥ ದಿನ'ದ ಹಿನ್ನೆಲೆಯಲ್ಲಿ ಭಾನುವಾರ ಜೈಪುರದಲ್ಲಿ 'ಮುಸ್ಕಾನ್ ಫೌಂಡೇಶನ್ ಫಾರ್ ರೋಡ್ ಸೇಫ್ಟಿ' ಎಂಬ ಎನ್ಜಿಒ ಆಶ್ರಯದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ವಿಶಿಷ್ಠ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. 10 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತಮ್ಮ ಮಗಳನ್ನು ಕಳೆದುಕೊಂಡ ಬೆಂಗಳೂರಿನ ತಾಂಬವೇಕರ್ ದಂಪತಿ ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಇಂತಹದ್ದೇ ಅಪಘಾತದಲ್ಲಿ ತಮ್ಮ ಮಗಳನ್ನು ಕಳೆದುಕೊಂಡ ಮುಸ್ಕಾನ್ ಫೌಂಡೇಶನ್ ಟ್ರಸ್ಟಿ ಶಾಂತನು ಭಾಸಿನ್ ಮತ್ತು ಅವರ ಪತ್ನಿ ಮೃದುಲ್ ಭಾಸಿನ್ ಕೂಡ ಭಾಗಿಯಾಗಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದರು. ಅಪಘಾತದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರು, ತಂದೆ-ತಾಯಿ, ಸಂಬಂಧಿಕರು 'ವಿಶ್ವ ಸ್ಮರಣಾರ್ಥ ದಿನ'ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜಾಗೃತಿಗೆ ಕೈ ಜೋಡಿಸಿದರು.
ಪ್ರತೀ ವರ್ಷ ನವೆಂಬರ್ ಮೂರನೇ ಭಾನುವಾರದಂದು ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗಾಗಿ 'ವಿಶ್ವ ಸ್ಮರಣಾರ್ಥ ದಿನ'ವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. 'ಮುಸ್ಕಾನ್ ಫೌಂಡೇಶನ್ ಫಾರ್ ರೋಡ್ ಸೇಫ್ಟಿ' ಕೂಡ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ರಸ್ತೆ ಸುರಕ್ಷತೆಯ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಾ ಬಂದಿದೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಹಲವರು ಮಾತನಾಡಿ, ತಮ್ಮ ನೋವುಗಳ ಸಹಿತ ರಸ್ತೆ ಸುರಕ್ಷತೆ ಕುರಿತು ಜಾಗೃತಿ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಜೈಪುರ ಪೊಲೀಸ್ ಆಯುಕ್ತ ಬಿಜು ಜಾರ್ಜ್ ಜೋಸೆಫ್, ರಸ್ತೆ ಸಂಚಾರ ಸುರಕ್ಷತೆ ಬಗ್ಗೆ ಸಾಕಷ್ಟು ತಿಳಿ ಹೇಳಿದರು. ಅತಿಥಿಯಾಗಿ ಸಿವಿಲ್ ಲೈನ್ಸ್ ಶಾಸಕ ಗೋಪಾಲ್ ಶರ್ಮಾ, ಮುಸ್ಕಾನ್ ಪ್ರತಿಷ್ಠಾನದ ಟ್ರಸ್ಟಿ ಡಾ.ಮೃದುಲ್ ಭಾಸಿನ್ ಸೇರಿದಂತೆ ಹಲವರು ಭಾಗಿಯಾಗಿ ರಸ್ತೆ ಸುರಕ್ಷತೆಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಬಳಕೆ, ಎಲ್ಲಾ ವಾಹನ ಸವಾರರು ಟ್ರಾಫಿಕ್ ಸಿಗ್ನಲ್ ಪಾಲನೆ, ವಾಹನಗಳ ಓವರ್ ಲೋಡ್ ತಡೆ ಕುರಿತು ಮಾತನಾಡಿದರು. ಜೈಪುರ ಸಿಟಿಜನ್ ಫೋರಂನ ಅಧ್ಯಕ್ಷ ರಾಜೀವ್ ಅರೋರಾ, ಮುಸ್ಕಾನ್ ಫೌಂಡೇಶನ್ ಅಧ್ಯಕ್ಷ ಮನೋಜ್ ಭಟ್ ಮತ್ತು ಖ್ಯಾತ ನರಶಸ್ತ್ರಚಿಕಿತ್ಸಕ ವಿಡಿ ಸಿನ್ಹಾ ಉಪಸ್ಥಿತರಿದ್ದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳು ಹಾಡು, ನೃತ್ಯ, ನಾಟಕ ಹಾಗೂ ಮುಂತಾದ ಸಾಂಸ್ಕೃತಿಕ ಪ್ರಸ್ತುತಿಗಳ ಮೂಲಕ ರಸ್ತೆಯಲ್ಲಿ ಜಾಗರೂಕತೆ ಮತ್ತು ಸುರಕ್ಷತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ನಗರದ 40ಕ್ಕೂ ಹೆಚ್ಚು ಶಾಲೆಗಳ ಸುಮಾರು 600 ಮಕ್ಕಳು ಪಾಲ್ಗೊಂಡಿದ್ದರು. ಶಾಲಾ ಮಕ್ಕಳಿಂದ ವಾದ್ಯ ಮೇಳದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಮಕ್ಕಳು ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ವಿಶೇಷ ಪ್ರದರ್ಶನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಜುಕುಮಾರ್ ನಿರ್ದೇಶನದ ‘ಹೆಲ್ಮೆಟ್’ ನಾಟಕದ ಮೂಲಕ ಮಕ್ಕಳು ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದರ ಮಹತ್ವ ಸಾರಿದರು. ರಸ್ತೆ ಸುರಕ್ಷತೆ ಆಧಾರಿತ ರೀಲ್ ಚಾಲೆಂಜ್ ವಿಜೇತರನ್ನು ಕೂಡ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ರಸ್ತೆ ಸುರಕ್ಷತೆ ಕುರಿತು ಕಿರುಚಿತ್ರಗಳನ್ನು ನಿರ್ಮಿಸುವ ಮೂಲಕ ತಮ್ಮ ಸೃಜನಶೀಲತೆ ಮತ್ತು ಕಲಾತ್ಮಕತೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಗೀತೆಗಳು ಮತ್ತು ರ‍್ಯಾಪ್ ಹಾಡುಗಳ ಅದ್ಭುತ ಪ್ರಸ್ತುತಿಗಳನ್ನು ಒಳಗೊಂಡಿತ್ತು.
ಈ ಸಂದರ್ಭದಲ್ಲಿ ವಿಶೇಷ ಸಂವಾದವನ್ನೂ ಆಯೋಜಿಸಲಾಗಿತ್ತು. ವಿಶೇಷ ಅತಿಥಿಗಳಾಗಿ ಬೆಂಗಳೂರಿನ ಅರುಂಧತಿ ಫೌಂಡೇಶನ್‌ನ ಸಂಜಯ್ ತಾಂಬವೇಕರ್ ಮತ್ತು ಡಾ.ಶುಭಾಂಗಿ ತಾಂಬವೇಕರ್, ಜೈಪುರ ನಗರ (ಪೂರ್ವ) ಉಪ ಪೊಲೀಸ್ ಆಯುಕ್ತ ತೇಜಸ್ವನಿ ಗೌತಮ್ ಮತ್ತು ಜಂಟಿ ಕಾರ್ಯದರ್ಶಿ, ಹಣಕಾಸು (ತೆರಿಗೆ) ಡಾ.ಖುಶಾಲ್ ಯಾದವ್ ಈ ಸಂವಾದದಲ್ಲಿ ಭಾಗಿಯಾಗಿದ್ದರು. ಕ್ವಿಜ್ ಮಾಸ್ಟರ್, ನರೇಂದ್ರ ಗುಪ್ತಾ ಅವರಿಂದ ಸಂವಾದಾತ್ಮಕ ರಸ್ತೆ ಸುರಕ್ಷತಾ ರಸಪ್ರಶ್ನೆಯನ್ನು ಸಹ ಆಯೋಜಿಸಲಾಯಿತು.
ಇದನ್ನೂ ಓದಿ: ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ: ಆರಂಭಿಕ ಹಂತದಲ್ಲಿ ಪತ್ತೆ, ತಡೆಗಟ್ಟುವಿಕೆ, ಚಿಕಿತ್ಸೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ