ಬೆಳಗಾವಿ: ಒಂದು ಕಾಲದಲ್ಲಿ ಕರಾಟೆ ಜಪಾನ್, ಚೀನಾ ಮುಂತಾದ ದೇಶಗಳಿಗೆ ಸೀಮಿತವಾಗಿತ್ತು. ಈಗ ಭಾರತದಲ್ಲೂ ಜನಪ್ರಿಯವಾಗಿದೆ. ಇಲ್ಲಿನ ಕರಾಟೆಪಟುಗಳು ದೇಶ-ವಿದೇಶಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ. ಇತ್ತೀಚೆಗೆ ಉಜ್ಬೇಕಿಸ್ತಾನದಲ್ಲಿ ನಡೆದ ವಿಶ್ವ ಕರಾಟೆ ಚಾಂಪಿಯನಶಿಪ್ನಲ್ಲಿ ಬೆಳಗಾವಿ ಜಿಲ್ಲೆಯ ಮಾಜಿ ಸೈನಿಕರೊಬ್ಬರ ಪುತ್ರಿ ಚಿನ್ನದ ಪದಕ ಜಯಿಸಿದ್ದು ಇದಕ್ಕೆ ಹೊಸ ಉದಾಹರಣೆ.
ತಾಷ್ಕೆಂಟ್ನಲ್ಲಿ ನವೆಂಬರ್ 5, 6 ಮತ್ತು 7ರಂದು ಆಯೋಜಿಸಿದ್ದ 9ನೇ ಇಂಟರ್ನ್ಯಾಶನಲ್ ಮಾರ್ಷಿಯಲ್ ಆರ್ಟ್ಸ್ ಗೇಮ್ಸ್ನಲ್ಲಿ ಗೋಕಾಕ್ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದ ಯುವತಿ ವೈಷ್ಣವಿ ಶಿವನಗೌಡ ನಿರ್ವಾಣಿ ಅವರು ಚಿನ್ನದ ಪದಕ ಗೆದ್ದಿದ್ದಾರೆ.
ವಿಶ್ವ ಕರಾಟೆ ಚಾಂಪಿಯನಶಿಪ್ ಫೆಡರೇಷನ್ ಆಯೋಜಿಸಿದ್ದ ಈ ಗೇಮ್ಸ್ನ 16-17ನೇ ವಯಸ್ಸಿನ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ವೈಷ್ಣವಿ, 20 ದೇಶಗಳ ಕರಾಟೆಪಟುಗಳ ನಡುವೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವೈಷ್ಣವಿ ಅವರ ತಂದೆ ಶಿವನಗೌಡ ನಿರ್ವಾಣಿ ಮಾಜಿ ಸೈನಿಕ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಬೆಂಗಳೂರಿನ ರೇವಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (ವಿಜ್ಞಾನ) ಓದುತ್ತಿರುವ ವೈಷ್ಣವಿ, 9ನೇ ವಯಸ್ಸಿನಿಂದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರು, ಮೈಸೂರು, ದೆಹಲಿ, ಚೆನ್ನೈ, ಹರಿಯಾಣ, ಕುರುಕ್ಷೇತ್ರ, ಗೋವಾದಲ್ಲಿ ನಡೆದ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಇದೇ ಮೊದಲ ಬಾರಿ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದಿರುವುದಕ್ಕೆ ಪೋಷಕರು ಸಂಭ್ರಮಿಸಿದ್ದಾರೆ. ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದಿಂದ ವೈಷ್ಣವಿಗೆ ಪುಷ್ಪವೃಷ್ಟಿ ಮಾಡಿ, ಸತ್ಕರಿಸಿ ಅಭಿನಂದಿಸಲಾಗಿದೆ. ಬೆಂಗಳೂರಿನ ಒಕಿನಾವಾ ಗೋಜುಕಾನ್ ಕರಾಟೆ-ಡೂ ತರಬೇತಿ ಶಾಲೆಯಲ್ಲಿ ವೈಷ್ಣವಿ ಕಠಿಣ ತರಬೇತಿ ಪಡೆದಿದ್ದಾರೆ.
ಈಟಿವಿ ಭಾರತದ ಜೊತೆಗೆ ಮಾತನಾಡಿದ ವೈಷ್ಣವಿ ನಿರ್ವಾಣಿ, "ನನ್ನ ದೇಶಕ್ಕೆ ಚಿನ್ನದ ಪದಕ ತಂದು ಕೊಟ್ಟಿದ್ದಕ್ಕೆ ತುಂಬಾ ಹೆಮ್ಮೆ ಮತ್ತು ಖುಷಿ ಇದೆ. ಇದು ನನಗೆ ವಿಶ್ವಮಟ್ಟದ ಮೊದಲ ಚಿನ್ನದ ಪದಕ. ಮುಂದೆ ಏಷಿಯನ್ ಚಾಂಪಿಯನಶಿಪ್ನಲ್ಲಿ ಚಿನ್ನದ ಗೆಲ್ಲುವ ಆಸೆಯಿದೆ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದೇನೆ" ಎಂದರು.
"ದೇಶಕ್ಕೆ ಕೀರ್ತಿ ತಂದ ಮಗಳ ಸಾಧನೆ ಕಂಡು ತುಂಬಾ ಖುಷಿ ಆಗುತ್ತಿದೆ. ಇದೇ ರೀತಿ ನಮ್ಮ ದೇಶದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಬೇಕು. ಆಕೆಗೆ ನಾವು ಸದಾ ಬೆನ್ನೆಲುಬಾಗಿ ನಿಲ್ಲುತ್ತೇವೆ. ನಾನು ದೇಶದ ಅತ್ಯಂತ ಕಠಿಣ ಕಮಾಂಡೋದಲ್ಲಿ ಕೆಲಸ ಮಾಡಿದ್ದು, ಕಾರ್ಗಿಲ್ ಯುದ್ಧ, ಸರ್ಜಿಕಲ್ ಸ್ಟ್ರೈಕ್ನಲ್ಲೂ ಭಾಗಿಯಾಗಿದ್ದೇನೆ. ನಾವು ಪಟ್ಟ ಕಷ್ಟ ಆಕೆಗೆ ತಿಳಿಸಿದ್ದೇನೆ. ಹಾಗಾಗಿ, ನಮ್ಮ ಮಗಳು ಕೂಡ ತುಂಬಾ ಗಟ್ಟಿಯಾಗಿದ್ದು, ಓದು ಮತ್ತು ಕರಾಟೆ ಎರಡರಲ್ಲೂ ಮುಂದಿದ್ದಾಳೆ" ಎಂದು ತಂದೆ ಶಿವನಗೌಡ ನಿರ್ವಾಣಿ ತಿಳಿಸಿದರು.
ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ಜಗದೀಶ ಪೂಜಾರಿ ಮಾತನಾಡಿ, "ವೈಷ್ಣವಿ ಚಿನ್ನದ ಪದಕ ಗೆದ್ದಿರುವುದು ಇಡೀ ಮಾಜಿ ಸೈನಿಕರ ಸಮುದಾಯಕ್ಕೆ ಹರ್ಷ ತಂದಿದೆ. ಏಷಿಯನ್ ಚಾಂಪಿಯನಶಿಪ್‌ನಲ್ಲೂ ಚಿನ್ನ ಗೆದ್ದು ಬರಲಿ" ಎಂದು ಹಾರೈಸಿದರು.
ಇದನ್ನೂ ಓದಿ: ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ 'ಸಿಇಟಿ-ಸಕ್ಷಮ': ಬೆಳಗಾವಿ ಜಿಪಂ ಸಿಇಒ ವಿನೂತನ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ
ಇದನ್ನೂ ಓದಿ: ಬೆಳಗಾವಿ ಗೆಣಸಿಗೆ ಉತ್ತರ ಭಾರತದಲ್ಲಿ ಭಾರೀ ಡಿಮ್ಯಾಂಡ್: ಕೈ ಸೇರಿದ ಉತ್ತಮ ಬೆಲೆ, ರೈತರು ಖುಷ್
ಇದನ್ನೂ ಓದಿ: ಸರ್ಕಾರಿ ಶಾಲೆ ಮಕ್ಕಳಿಗೆ ಸ್ವಂತ ಖರ್ಚಿನಲ್ಲಿ ವಿಮಾನದಲ್ಲಿ ಹೈದರಾಬಾದ್ ಪ್ರವಾಸ: ಹಾಜರಾತಿ ಹೆಚ್ಚಿಸಲು ಶಿಕ್ಷಕನ ಐಡಿಯಾ