ಬೆಂಗಳೂರು: ಶಾಲೆ ಪ್ರಾರಂಭದಲ್ಲಿ ಸರ್ಕಾರ ಎಲ್ಲರ ವಿಶ್ವಾಸ ತೆಗೆದುಕೊಳ್ಳಬೇಕು. ಪೋಷಕರು, ವಿದ್ಯಾರ್ಥಿಗಳು, ಪ್ರತಿಪಕ್ಷಗಳ ವಿಶ್ವಾಸ ಪಡೆಯಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಲಹೆ ನೀಡಿದ್ದಾರೆ.
ಶಾಲೆಗಳ ಮರು ಆರಂಭದ ಬಗ್ಗೆ ಚಿಂತನೆ ನಡೆಸಿರುವ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸರ್ಕಾರ ಈಗ ತುಕ್ಕು ಹಿಡಿದು ಹೋಗಿದೆ. ಎಲ್ಲ ವಿಚಾರಗಳಲ್ಲೂ ಸರ್ಕಾರ ವಿಫಲ ಆಗಿದೆ. ಈಗಲಾದರೂ ಸರ್ಕಾರ ರಾಜ್ಯಪಾಲರ ಜೊತೆ ಚರ್ಚೆ ಮಾಡಬೇಕು. ಪ್ರತಿಪಕ್ಷಗಳ ಜೊತೆಯೂ ಮಾತುಕತೆ ನಡೆಸಬೇಕು.
ಕಲಾಪ ನಡೆಸೋದ್ರಲ್ಲೂ ತರಾತುರಿ ಮಾಡಿದ್ರು. ಲೋಕಸಭೆ ಕಲಾಪಗಳನ್ನೂ ಸರಿಯಾಗಿ ನಡೆಸಲಿಲ್ಲ. ಇವನ್ನೇ ನಡೆಸೋಕೆ ಸುರಕ್ಷತೆ ಇಲ್ಲ ಅಂತೀರಾ. ಹಾಗಾದ್ರೆ ಶಾಲೆಗಳನ್ನ ಸುರಕ್ಷಿತವಾಗಿ ನಡೆಸೋಕೆ ಸಾಧ್ಯವೇ? ಎಲ್ಲರ ಸಲಹೆಗಳನ್ನ ತೆಗೆದುಕೊಳ್ಳಬೇಕು. ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ತೀರ್ಮಾನ ಮಾಡಬೇಕಿತ್ತು ಎಂದು ಸಲಹೆ ನೀಡಿದ್ದಾರೆ.
ಸುರೇಶ್ ಅಂಗಡಿ ಅಂತ್ಯಕ್ರಿಯೆ ವಿಚಾರದ ಬಗ್ಗೆ ಮಾತನಾಡಿ, ಸುರೇಶ್ ಅಂಗಡಿಯವರ ಅಂತ್ಯಕ್ರಿಯೆ ಸರಿಯಾಗಿ ನಡೆಯಲಿಲ್ಲ. ಮಾನವೀಯತೆ ದೃಷ್ಟಿಯಿಂದ ನಡೆದುಕೊಳ್ಳಲಿಲ್ಲ. ಗೌರವಯುತವಾಗಿ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಸರ್ಕಾರವನ್ನ ಇಳಿಸುವ ಪ್ರಯತ್ನ ವಿಚಾರ ಕುರಿತು ಮಾತನಾಡಿ, ಕೇಂದ್ರ ಸರ್ಕಾರ ಇಲ್ಲಿ ಅವರ ನಾಯಕರಿಂದಲೇ ಅವರಿಗೆ ಸರಿಯಾಗಿ ಸಹಕಾರವಿಲ್ಲ. ಯಡಿಯೂರಪ್ಪ ಅವರಿಗೆ ಸಹಕಾರ ಸಿಗ್ತಿಲ್ಲ. ಅವರನ್ನ ಕೆಳಗಿಳಿಸುವ ಪ್ರಯತ್ನ ಮಾಡ್ತಿದ್ದಾರೆ. ಆಂತರಿಕ ಕಚ್ಚಾಟದಲ್ಲೇ ಸರ್ಕಾರ ಬಿದ್ದು ಹೋಗುತ್ತದೆ. ರಾಜ್ಯದಲ್ಲಿ ಕುರ್ಚಿಗಾಗಿ ಅವರಲ್ಲೇ ಕೆಲವರು ಕಾದಿದ್ದಾರೆ. ರಾಷ್ಟ್ರಮಟ್ಟದ ನಾಯಕರೊಬ್ಬರು ಕಾದುಕೂತಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಪದಾಧಿಕಾರಿಗಳ ನೇಮಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಇದರ ಬಗ್ಗೆ ನಾನು ಮಾತನಾಡಿದ್ದೇನೆ. ಶೀಘ್ರದಲ್ಲಿಯೇ ಪದಾಧಿಕಾರಿಗಳ ನೇಮಕ ನಡೆಯಲಿದೆ ಎಂದು ತಿಳಿಸಿದರು.