ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಸಂಜಯ್ ನಗರ ವಾರ್ಡ್ನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೋಟರಿ ಬೆಂಗಳೂರು ರಾಜ್ ಮಹಲ್ ವಿಲಾಸ್ ಕ್ಲಬ್, ವೈದ್ಯಕೀಯ ಸೇವೆಗಾಗಿ ಪರಿಸರ ಸ್ನೇಹಿ ಸಂಚಾರಿ 'ಇ-ಸಂಜೀವಿನಿ' 2 ದ್ವಿಚಕ್ರ ವಾಹನಗಳನ್ನು ಉಚಿತವಾಗಿ ಹಸ್ತಾಂತರಿಸಿದರು.
ಈ ವೇಳೆ ಶಾಸಕ ಭೈರತಿ ಸುರೇಶ್ ಮಾತನಾಡಿ, ರೋಟರಿ ಕ್ಲಬ್ ಜನರಿಗೆ ಸಾಕಷ್ಟು ಸಹಾಯ ಮಾಡುತ್ತಿರುವ ಸಂಸ್ಥೆಯಾಗಿದ್ದು, ಕೋವಿಡ್ ಸಮಯದಲ್ಲಿ ಪಾಲಿಕೆಯ ಜೊತೆ ಕೈಜೋಡಿಸಿ ಬಹಳಷ್ಟು ಕೆಲಸ ಮಾಡಿದೆ. ಈ ಭಾಗದಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಕಾಲ ಕಾಲಕ್ಕೆ ಸೂಕ್ತ ಕ್ರಮಗಳನ್ನು ಕೈಗೊಂಡು ಕೆಲಸ ಮಾಡಲಾಗುತ್ತಿದೆ ಎಂದರು.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ಸಂಜಯ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಜನರಿಗೆ ತ್ವರಿತಗತಿಯಲ್ಲಿ ವೈದ್ಯಕೀಯ ಸೇವೆಯನ್ನು ಕಲ್ಪಿಸಬಹುದಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ದ್ವಿಚಕ್ರ ವಾಹನಗಳನ್ನು ನೀಡಿರುವುದರಿಂದ, ಸ್ಥಳೀಯ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ಬಹಳ ಉಪಯೋಗಕಾರಿಯಾಗಿದೆ ಎಂದರು.
ಇದರಿಂದ ತಕ್ಷಣ ಮನೆ ಬಾಗಿಲಿಗೆ ತೆರಳಿ ಆರೋಗ್ಯ ಸೇವೆ ನೀಡಬಹುದಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಸಿಬ್ಬಂದಿ, ಎನ್‌ಎನ್‌ಎ, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಆಶಾಕಾರ್ಯಕರ್ತರು ಇಮ್ಯುನೈಸೇಶನ್, ವಿಶೇಷ ಆರೋಗ್ಯ ಶಿಬಿರ, ಪೌಷ್ಟಿಕ ಕಾರ್ಯಕ್ರಮ, ಅಂಗನವಾಡಿ ತಪಾಸಣೆ, ಲಸಿಕೆ ಹಾಕುವುದು, ಕೊಳಗೇರಿ ಪ್ರದೇಶಗಳು, ಸಮೀಕ್ಷೆ ಮಾಡುವುದು ಸೇರಿದಂತೆ ಇನ್ನಿತರೆ ಕಾರ್ಯಗಳಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಳಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಆರೋಗ್ಯ ಸೇವೆಗಾಗಿ ಉಚಿತವಾಗಿ ನೀಡುರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ವ್ಯವಸ್ಥೆಯನ್ನು ಸಂಜಯ್ ನಗರದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದು, ಈ ಯೋಜನೆ ಯಶಸ್ವಿಯಾದರೆ ನಗರದ ಇತರೆ ವಾರ್ಡ್ಗಳಲ್ಲಿಯೂ ಹಂತ-ಹಂತವಾಗಿ ಸಂಚಾರಿ ವೈದ್ಯಕೀಯ ದ್ವಿಚಕ್ರ ವಾಹನಗಳ ವ್ಯವಸ್ಥೆ ಮಾಡಲು ಕ್ರಮ ಜರುಗಿಸಲಾಗುವುದು ಎಂದರು.