ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ಶಿಸ್ತು ಪುನರ್ ರಚನೆಗೋಸ್ಕರ (AICC Action Committee) ನಿರ್ಮಿಸಲಾಗಿರುವ ಎಐಸಿಸಿ ಕ್ರಿಯಾ ಸಮಿತಿಯಲ್ಲಿ ರಾಜ್ಯದ ಮಾಜಿ ಡಿಸಿಎಂ ಜಿ.ಪರಮೇಶ್ವರ್ಗೆ ಸ್ಥಾನ ಲಭಿಸಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಶಿಸ್ತನ್ನು ಪುನರ್ ರಚಿಸುವ ಉದ್ದೇಶದಿಂದ ವಿಶೇಷ ಆಸಕ್ತಿ ವಹಿಸಿ ರಚಿಸಿರುವ ಎಐಸಿಸಿಯ ಕ್ರಿಯಾ ಸಮಿತಿಯು ತಕ್ಷಣವೇ ಜಾರಿಗೆ ಬಂದಿದ್ದು, ಮಾಜಿ ಡಿಸಿಎಂ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷರು ಹಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಡಾ. ಜಿ. ಪರಮೇಶ್ವರ್ಗೆ ಸಮಿತಿಯಲ್ಲಿ ಸದಸ್ಯ ಸ್ಥಾನ ನೀಡಲಾಗಿದೆ.
ಐದು ಜನರ ಈ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆ್ಯಂಟನಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಸದಸ್ಯ ಕಾರ್ಯದರ್ಶಿಗಳಾಗಿ ತಾರಿಕ್ ಅನ್ವರ್, ಸದಸ್ಯರಾಗಿ ಅಂಬಿಕಾ ಸೋನಿ, ಜೈಪ್ರಕಾಶ್ ಅಗರ್ವಾಲ್ ಹಾಗೂ ಪರಮೇಶ್ವರ್ ಆಯ್ಕೆಯಾಗಿದ್ದಾರೆ.
![ರಾಷ್ಟ್ರೀಯ ಕಾಂಗ್ರೆಸ್ ಕ್ರಿಯಾ ಸಮಿತಿ](https://etvbharatimages.akamaized.net/etvbharat/prod-images/kn-bng-05-national-congress-new-committee-script-7208077_18112021195204_1811f_1637245324_192.jpg)
2024ರಲ್ಲಿ ಎದುರಾಗುವ ಲೋಕಸಭೆ ಚುನಾವಣೆ ಉದ್ದೇಶದಿಂದ ರಚಿಸಲಾಗಿದ್ದು, ದೇಶದ ವಿವಿಧ ರಾಜ್ಯಗಳಲ್ಲಿನ ಹಿರಿಯ ನಾಯಕರ ಸಲಹೆ ಸೂಚನೆ ಹಾಗೂ ಮಾರ್ಗದರ್ಶನ ಪಡೆದು ಅಗತ್ಯ ಕ್ರಮ ಕೈಗೊಳ್ಳಲು ಸಮಿತಿಗೆ ಸೂಚಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನೂತನ ಆದೇಶ ಹೊರಡಿಸಿದ್ದಾರೆ.
ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಮುಂಬರುವ ಚುನಾವಣೆಯಲ್ಲಿ ಸದೃಢವಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಉದ್ದೇಶದಿಂದ ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗುತ್ತಿದೆ. ಈ ಸಮಿತಿಗಳಲ್ಲಿ ರಾಜ್ಯದ ನಾಯಕರಿಗೂ ಸ್ಥಾನಮಾನ ಲಭಿಸುತ್ತಿರುವುದು ವಿಶೇಷವಾಗಿದೆ.
![ರಮೇಶ್ ಕುಮಾರ್](https://etvbharatimages.akamaized.net/etvbharat/prod-images/kn-bng-05-national-congress-new-committee-script-7208077_18112021195204_1811f_1637245324_226.jpg)
ಈ ಮೊದಲು ರಾಷ್ಟ್ರೀಯ ಕಾಂಗ್ರೆಸ್ 75ನೇ ಸ್ವಾತಂತ್ರ್ಯೋತ್ಸವವನ್ನು ವರ್ಷವಿಡೀ ಆಚರಿಸಲು ತೀರ್ಮಾನಿಸಿದ್ದು, ಇದಕ್ಕಾಗಿ ರಚಿಸಿದ ವಿಶೇಷ ಸಮಿತಿಯಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸ್ಥಾನ ಪಡೆದಿದ್ದರು. 11 ಮಂದಿಯ ವಿಶೇಷ ಸಮಿತಿಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅಧ್ಯಕ್ಷರಾಗಿದ್ದರು.
ಇನ್ನು ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಜನಾಂದೋಲನ ಆರಂಭಿಸಲು ತೀರ್ಮಾನಿಸಿದ್ದು, ವಿಶೇಷ ಸಮಿತಿ ರಚಿಸಿದೆ. ದೇಶಾದ್ಯಂತ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಇದಕ್ಕಾಗಿ ವಿಶೇಷ ಆಂದೋಲನ ನಡೆಸಲು ವಿಶೇಷ ಸಮಿತಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ರಚಿಸಿದ್ದು, ದಿಗ್ವಿಜಯ್ ಸಿಂಗ್ ನೇತೃತ್ವದ 9 ಸದಸ್ಯರ ಸಮಿತಿಯಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸ್ಥಾನ ಪಡೆದಿದ್ದರು.