ದೇವನಹಳ್ಳಿ: ಕೋವಿಡ್ ನಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರಕ್ಕೆ ಅವರ ಕುಟುಂಬಸ್ಥರೇ ಹಿಂದೇಟು ಹಾಕುತ್ತಿರುವ ಸಮಯದಲ್ಲಿ, ದೇವನಹಳ್ಳಿ ಪೊಲೀಸರು ಹಾಗೂ ಯುವಕರ ತಂಡ ಈಗಾಗಲೇ ಸುಮಾರು 70ಕ್ಕೂ ಹೆಚ್ಚುಶವ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪಿಎಸ್ಐ ನಾಗರಾಜ ನೇತೃತ್ವದ 15 ಯುವಕರ 'ದೇವನಹಳ್ಳಿ ವಾರಿಯರ್ಸ್' ತಂಡ ಬಡವರು ಮತ್ತು ಅನಾಥರು ಸೋಂಕಿಗೆ ಬಲಿಯಾದಲ್ಲಿ ಉಚಿತವಾಗಿ ಶವ ಸಂಸ್ಕಾರ ಮಾಡುತ್ತಿದೆ. ದೇವನಹಳ್ಳಿ ಸರ್ಕಾರಿ ಆಸ್ಪತ್ರೆ, ಆಕಾಶ್ ಆಸ್ಪತ್ರೆ ಸೇರಿದಂತೆ ಇತರ ಸ್ಥಳಗಳಲ್ಲಿ ಸೋಂಕಿಗೆ ಬಲಿಯಾದಲ್ಲಿ ಕರೆ ಮಾಡಿದರೆ ಸಾಕು ಅಲ್ಲಿಗೆ ಹೋಗಿ ಮುಂದಿನ ಕಾರ್ಯ ಕೈಗೊಳ್ಳುತ್ತಾರೆ.
ಪಿಪಿಇ ಕಿಟ್ ಧರಿಸಿ ಅಂತ್ಯ - ಸಂಸ್ಕಾರ ಮಾಡುವ ತಂಡ ಕುಟುಂಬಸ್ಥರ ಬಳಿ ನಯಾ ಪೈಸೆಯೂ ಪಡೆಯುತ್ತಿಲ್ಲ. ಅಲ್ಲದೇ ಮೃತ ಸೋಂಕಿತರ ಮನೆಯ ಬಳಿ ತೆರೆಳಿ ಸ್ಯಾನಿಟೈಸರ್ ಸಿಂಪಡಣೆಯನ್ನು ಕೂಡಾ ಮಾಡುತ್ತಿದ್ದಾರೆ.
ಇದರ ಜೊತೆ ಪ್ರೀ ಟೈಂನಲ್ಲಿ ದೇವನಹಳ್ಳೀ ವಾರಿಯರ್ಸ್ ತಂಡ ರಸ್ತೆ ಬದಿಗಳಲ್ಲಿ ಗಿಡ ನೆಡುವುದು, ಪಕ್ಷಿಗಳ ನೆಲೆಗೆ ಗೂಡು ನಿರ್ಮಾಣ ಕಾರ್ಯ ಮಾಡುತ್ತಾರೆ. ಇಂದು ಕೂಡ ಕೊರೊನಾಗೆ ದಂಪತಿ ಮೃತಪಟ್ಟಿದ್ದು, ಕುಟುಂಬಸ್ಥರ ನೆರವಿಗೆ ಪಿಎಸ್ಐ ನಾಗರಾಜ್ 25 ಸಾವಿರ ವೈಯಕ್ತಿಕ ಆರ್ಥಿಕ ಸಹಾಯ ಮಾಡಿದ್ದಾರೆ.
ಕೊರೊನಾ ಸಂಕಷ್ಟ ಕಾಲದಲ್ಲಿ ಅದೇಷ್ಟೋ ಜನರ ನೆರವಿಗೆ ಯಾರೊಬ್ಬರು ಬರುತ್ತಿಲ್ಲ. ಆದ್ರೆ ದೇವನಹಳ್ಳಿ ಯುವಕರು ಪೊಲೀಸರ ಜತೆಗೂಡಿ ತಂಡ ಕಟ್ಟಿಕೊಂಡು, ಬೆಡ್ ಇಲ್ಲದೇ ಪರದಾಡುವವರಿಗೆ ಬೆಡ್ ಕೋಡಿಸುವುದು ಸೇರಿದಂತೆ, ಅನಾಥ ಶವಗಳಿಗೆ ಮುಕ್ತಿ ಕೊಡುವ ಮೂಲಕ ಮಾನವೀಯತೆ ಮೆರೆಯುತ್ತಿರೋದು ನಿಜಕ್ಕೂ ಶ್ಲಾಘನಿಯ.