ಬೆಂಗಳೂರು: ಕಳೆದ ಬಾರಿ ಹಾಗೂ ಈ ವರ್ಷ ರಾಜ್ಯದ ಆರ್ಥಿಕತೆ ಪಾಲಿಗೆ ಅತ್ಯಂತ ಕೆಟ್ಟ ವರ್ಷವಾಗಿದೆ. ಕೋವಿಡ್ ಅಬ್ಬರ, ಲಾಕ್‌ಡೌನ್ ಹೊಡೆತಕ್ಕೆ ರಾಜ್ಯದ ಆರ್ಥಿಕತೆ ಹಿಂದೆಂದೂ ಕಂಡರಿಯದಷ್ಟು ಪಾತಾಳಕ್ಕೆ ಕುಸಿದಿದೆ. ಆರ್ಥಿಕ ಚಟುವಟಿಕೆಗಳೆಲ್ಲವೂ ಸ್ಥಗಿತವಾದ ಕಾರಣ ರಾಜ್ಯ ಸರ್ಕಾರ ಭಾರೀ ಆದಾಯ ಕೊರತೆ ಎದುರಿಸಿದೆ. ಆದಾಯ ಕೊರತೆಯಿಂದ ಅಭಿವೃದ್ಧಿ ಕೆಲಸಗಳಿಗೂ ಹಣ ಇಲ್ಲದಂತಾಗಿದೆ.
ರಾಜ್ಯ ಸರ್ಕಾರದ ಎಲ್ಲಾ ಆದಾಯ ತರುವ ಇಲಾಖೆಗಳು ಸಂಪನ್ಮೂಲ ಕ್ರೋಢೀಕರಿಸುವಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಆದಾಯ ಸಂಗ್ರಹದ ಗುರಿ ತಲುಪಲಾಗದೆ ಭಾರೀ ಖೋತಾ ಅನುಭವಿಸಿದೆ. ವಾಣಿಜ್ಯ ತೆರಿಗೆ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಸಾರಿಗೆ ಇಲಾಖೆ ಹಾಗೂ ಅಬಕಾರಿ ಇಲಾಖೆ ನಿರೀಕ್ಷಿತ ಆದಾಯ ಸಂಗ್ರಹಿಸಲಾಗದೆ ಬೊಕ್ಕಸ ತುಂಬಿಸುವಲ್ಲಿ ವಿಫಲವಾಗಿದೆ. ಇಂಥ ಆರ್ಥಿಕ ಸಂಕಷ್ಟದ ಮಧ್ಯೆ ರಾಜ್ಯದ ಗಣಿಗಾರಿಕೆ ಇಲಾಖೆ ರಾಜಧನ ರೂಪದಲ್ಲಿ ಗುರಿ ಮೀರಿ ಹೆಚ್ಚಿನ ಆದಾಯ ಸಂಗ್ರಹ ಮಾಡಿದೆ.
ರಾಜಧನ ಸಂಗ್ರಹದ ಮೇಲೆ ಲಾಕ್‌ಡೌನ್ ಎಫೆಕ್ಟ್
ಗಣಿಗಾರಿಕೆ ಹಾಗೂ ಭೂ ವಿಜ್ಞಾನ ಇಲಾಖೆ ಲಾಕ್‌ಡೌನ್, ಕೊರೊನಾ ಮಧ್ಯೆಯೂ ಆದಾಯ ಸಂಗ್ರಹದಲ್ಲಿ ಉತ್ತಮ ನಿರ್ವಹಣೆ ತೋರಿದೆ. ಕಳೆದ ವರ್ಷದ ನಾಲ್ಕು ತಿಂಗಳ ದೇಶ ಲಾಕ್‌ಡೌನ್ ವೇಳೆಯೂ ಗಣಿಗಾರಿಕೆ ಇಲಾಖೆ ರಾಜಧನ ರೂಪದಲ್ಲಿ ಹೆಚ್ಚಿನ ಆದಾಯ ಸಂಗ್ರಹ ಮಾಡಿದೆ ಎಂದು ಗಣಿಗಾರಿಕೆ ಇಲಾಖೆ ನಿರ್ದೇಶಕ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ಲಾಕ್‌ಡೌನ್ ಇದ್ದರೂ ಗಣಿಗಾರಿಕೆ ಚಟುವಟಿಕೆಗಳಿಗೆ ಯಾವುದೇ ಹಿನ್ನಡೆಯಾಗಿಲ್ಲ. ಈ ಬಾರಿ ಹೇರಿರುವ 54 ದಿನಗಳ ಲಾಕ್‌ಡೌನ್‌ನಿಂದಲೂ ಗಣಿಗಾರಿಕೆ ಚಟುವಟಿಕೆ ಅಬಾಧಿತವಾಗಿತ್ತು. ಹೀಗಾಗಿ ನಮ್ಮ ಇಲಾಖೆಯಿಂದ ರಾಜಧನ ಸಂಗ್ರಹದಲ್ಲಿ ಏರಿಕೆ ಕಾಣುತ್ತಿದೆ. ಯಾವುದೇ ರೀತಿಯಲ್ಲೂ ಲಾಕ್‌ಡೌನ್ ಪರಿಣಾಮ ಬೀರಿಲ್ಲ ಎಂದು ಈಟಿವಿ ಭಾರತ್‌ಗೆ ಮಾಹಿತಿ ನೀಡಿದ್ದಾರೆ.
ಗಣಿಗಾರಿಕೆ ಹಾಗೂ ಭೂ ವಿಜ್ಞಾನ ಇಲಾಖೆ ನೀಡಿರುವ ಅಂಕಿ ಅಂಶದ ಪ್ರಕಾರ 2020-21 ಸಾಲಿನಲ್ಲಿ ವಾರ್ಷಿಕ ಗುರಿಗಿಂತ 103% ಖನಿಜ ಹಾಗೂ ಉಪ ಖನಿಜಗಳಿಂದ ರಾಜಧನ ಸಂಗ್ರಹ ಮಾಡಿದೆ. 2021-22 ಸಾಲಿನಲ್ಲಿ ಮೇ ತಿಂಗಳ ವರೆಗೆ 26% ರಾಜಧನ ಸಂಗ್ರಹ ಮಾಡುವಲ್ಲಿ ಸಫಲವಾಗಿದೆ.
ಇದನ್ನೂ ಓದಿ: ಸಿಎಂ ಅವರೇ ನಿಮ್ಮ ಕುರ್ಚಿ ರಕ್ಷಣೆ ಕಸರತ್ತು ಮುಗಿದಿದ್ದರೆ ಸ್ವಲ್ಪ ಲಸಿಕಾಕರಣದ ಬಗ್ಗೆ ಗಮನ ಹರಿಸಿ : ಸಿದ್ದರಾಮಯ್ಯ
2021-22ರ ಮೇ ವರೆಗಿನ ಪ್ರಗತಿ
ಈ ವರ್ಷ ಹೇರಲಾದ 54 ದಿನಗಳ ಲಾಕ್‌ಡೌನ್ ಮಧ್ಯೆಯೂ ಗಣಿಗಾರಿಕೆ ಇಲಾಖೆ ರಾಜಧನ ಸಂಗ್ರಹದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಮೇ ತಿಂಗಳ ವರೆಗೆ ಮುಖ್ಯ ಖನಿಜ ರೂಪದಲ್ಲಿ 844.10 ಕೋಟಿ ರೂ. ರಾಜಧನ ಸಂಗ್ರಹ ಮಾಡಿದೆ. ಉಪ ಖನಿಜದಿಂದ ರಾಜಧನ ರೂಪದಲ್ಲಿ 229.99 ಕೋಟಿ ರೂ. ಸಂಗ್ರಹ ಮಾಡಿದೆ. ಆ ಮೂಲಕ ಒಟ್ಟು 1074.09 ಕೋಟಿ ರೂ. ರಾಜಧನ ಸಂಗ್ರಹ ಮಾಡಿದೆ. ಈವರೆಗೆ ಒಟ್ಟು 26% ರಾಜಧನ ಸಂಗ್ರಹ ಮಾಡಿದೆ.
ರಾಜಧನ ಸಂಗ್ರಹದ ಪ್ರಗತಿ ಹೇಗಿದೆ?
2018-19:
ಸಂಗ್ರಹದ ಗುರಿ - 3,000 ಕೋಟಿ ರೂ.
ಒಟ್ಟು ಸಂಗ್ರಹ - 3026.42 ಕೋಟಿ ರೂ.
ಶೇಕಡಾವಾರು - 101%
2019-20:
ಸಂಗ್ರಹದ ಗುರಿ - 3550 ಕೋಟಿ ರೂ.
ಒಟ್ಟು ಸಂಗ್ರಹ - 3629.02 ಕೋಟಿ ರೂ.
ಶೇಕಡವಾರು - 102%
2020-21:
ಸಂಗ್ರಹದ ಗುರಿ - 3750 ಕೋಟಿ ರೂ.
ಒಟ್ಟು ಸಂಗ್ರಹ - 3893.44 ಕೋಟಿ ರೂ.
ಶೇಕಡವಾರು - 103%
2021-22:
ಸಂಗ್ರಹದ ಗುರಿ - 4,000 ಕೋಟಿ ರೂ.
ಮೇ ವರೆಗೆ ಸಂಗ್ರಹ - 1074.09 ಕೋಟಿ ರೂ.
ಶೇಕಡವಾರು - 26%
2020-21ರ ಖನಿಜವಾರು ರಾಜಧನ ಸಂಗ್ರಹ
ಕಬ್ಬಿಣದ ಅದಿರು - 1293.35 ಕೋಟಿ
ಸುಣ್ಣದ ಕಲ್ಲು- 335.36 ಕೋಟಿ
ಮ್ಯಾಂಗನೀಸ್ - 14.54 ಕೋಟಿ
ಕಟ್ಟಡ ಕಲ್ಲು/ಇತರೆ ಖನಿಜ - 1544.79 ಕೋಟಿ
ಮರಳು ಮಾರಾಟದಿಂದ - 108.54 ಕೋಟಿ