ಬೆಂಗಳೂರು: ವಲಸೆ ತೆರಳುತ್ತಿದ್ದ ಸಂದರ್ಭ ಹಾಗೂ ಹಸಿವಿನಿಂದ ಮೃತ ವಲಸೆ ಕಾರ್ಮಿಕರ ಕುಟುಂಬಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಒತ್ತಾಯಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೇ ರೈಲ್ವೆ ಹಳಿಗಳ ಮೇಲೆ ಮಲಗಿದ್ದಾಗ ರೈಲು ಹರಿದು ಮತ್ತು ರಸ್ತೆಯಲ್ಲಿ ನಡೆದು ಹೋಗುವಾಗ ಕೆಲ ಕಾರ್ಮಿಕರು ಮೃತಪಟ್ಟಿದ್ದಾರೆ. ಮತ್ತೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಕುಟುಂಬಗಳಿಗೆ ಕೇಂದ್ರ ಸರ್ಕಾರವೇ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಲಾಕ್ಡೌನ್ ಏರಿಕೆ ಸೇರಿದಂತೆ ಕೋವಿಡ್ ವಿಚಾರವಾಗಿ ನಿರ್ಧಾರ ಕೈಗೊಳ್ಳುವಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಧಾನಿಗಳ ಅಣತಿಯಂತೆ ಕಾರ್ಯ ನಿರ್ವಹಿಸಿವೆ. ಪ್ರತಿಪಕ್ಷಗಳನ್ನು ವಿಶ್ವಾಸಕ್ಕೇ ಪಡೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೊರೊನಾ ಹರಡುವುದನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗುತ್ತಿವೆ. ಅಲ್ಲದೇ, ಇದರಿಂದ ಸಮಸ್ಯೆಗೆ ಒಳಗಾದವರ ಬದುಕು ಹಸನಾಗಿಸುವ ಮತ್ತು ಆರ್ಥಿಕವಾಗಿ ದೇಶವನ್ನು ಮೇಲೆತ್ತುವ ಕಾರ್ಯ ಸರ್ಕಾರಗಳು ಮಾಡುತ್ತಿಲ್ಲ ಎಂದು ಆರೋಪಿಸಿದರು.
ಕಾರ್ಮಿಕರಿಗೆ ಆಹಾರ ಪೂರೈಕೆಯಲ್ಲಿ ನಿಗದಿತ ಕ್ರಮ ಕೈಗೊಳ್ಳುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಖುದ್ದು ಸುಪ್ರೀಂಕೋರ್ಟ್ ಕೂಡ ಬೇಸರ ವ್ಯಕ್ತಪಡಿಸಿದೆ. ಸುಮೋಟೋ ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸುಪ್ರೀಂಕೋರ್ಟ್ ಹಾಕಿರುವ ಛೀಮಾರಿಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.