ಬೆಂಗಳೂರು: ಗೋವಾದಲ್ಲಿ ಸರ್ಕಾರ ರಚನೆಗೆ ಡಿಕೆಶಿ ವಿಶೇಷ ವಿಮಾನ ತೆಗೆದುಕೊಂಡು ಹೋದ್ರು. ಮೇಕೆದಾಟು ಸಂಬಂಧ ತಮಿಳುನಾಡು ಕಾಂಗ್ರೆಸ್ ನಾಯಕರ ಮನಪರಿವರ್ತನೆ ಮಾಡಲು ಒಂದು ವಿಶೇಷ ವಿಮಾನ ತೆಗೆದುಕೊಂಡು ಹೋಗಲು ಆಗಲ್ವಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಕಸ್ಮಾತ್ ಕಷ್ಟ ಆದರೆ ನಾನು ಯಾರದ್ದಾದರೂ ಕೈ ಕಾಲು ಹಿಡಿದು ವಿಶೇಷ ವಿಮಾನ ವ್ಯವಸ್ಥೆ ಮಾಡುತ್ತೇನೆ. ನಿರ್ಣಯ ಹಿಂಪಡೆಯುವಂತೆ ಡಿಕೆಶಿ ಅವರು ಅಲ್ಲಿನ ಸಿಎಂ ಸ್ಟಾಲಿನ್, ಚಿದಂಬರಂ ಮನವೊಲಿಸಲಿ. ಇವರು ಸಂಪೂರ್ಣವಾಗಿ ತಮಿಳುನಾಡು ಕಾಂಗ್ರೆಸ್ ಮನವೊಲಿಸಿದರೆ, ಅಲ್ಲಿರುವ ಬಿಜೆಪಿ ಜತೆಗೆ ನಾನು ಮಾತನಾಡುತ್ತೇನೆ ಎಂದು ಸವಾಲು ಹಾಕಿದರು.
ಪ್ರಾಮಾಣಿಕ ಪಾದಯಾತ್ರೆ ಅಲ್ಲ: ಈಗ ಪಾದಯಾತ್ರೆ ಮಾಡಿದವರು ಯಾರು?, ಕಾಂಗ್ರೆಸ್ನವರು. ಹಾಗಾದರೆ ಅಲ್ಲಿರುವ ಕಾಂಗ್ರೆಸ್ ನಿಲುವು ಏನು ಅಂತಾ ಹೇಳಿ. ಬಿಜೆಪಿ ನಾಲ್ಕೇ ಸೀಟು ಇರುವ ಪಾರ್ಟಿ. ಅಲ್ಲಿ ನಮ್ಮ ಮಾತು ನಡೆಯಲ್ಲ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಒಂದು ದಿನವಾದರೂ ಹೋಗಿ ಸ್ಟ್ಯಾಲಿನ್ ಮನವೊಲಿಸು ಪ್ರಯತ್ನ ಮಾಡಿದ್ರಾ?. ನದಿ ವಿವಾದ ಹಿಂದಿನಿಂದಲೂ ಇದೆ. ಆದರೆ ಇವರದ್ದು ಪ್ರಾಮಾಣಿಕ ಪಾದಯಾತ್ರೆ ಅಲ್ಲ ಎಂದು ತಿರುಗೇಟು ನೀಡಿದರು.
ಮೇಕೆದಾಟು ವಿಚಾರವಾಗಿ ಕರ್ನಾಟಕ ಬದ್ಧವಾಗಿದೆ: ತಮಿಳುನಾಡಿನ ನಿರ್ಣಯವನ್ನು ಅಲ್ಲಿನ ಬಿಜೆಪಿ ವಿರೋಧಿಸಬಹುದಿತ್ತು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಲ್ಲಿರುವ ಬಿಜೆಪಿ ಅಲ್ಲಿನ ಸ್ಟ್ಯಾಂಡ್ ತೆಗೆದುಕೊಳ್ಳುತ್ತದೆ. ಈಗ ಬೆಳಗಾವಿ ವಿಚಾರ ಬಂದಾಗ ರಾಜ್ಯ ಬಿಜೆಪಿ ಮಹಾರಾಷ್ಟ್ರದ ಪರ ನಿಲ್ಲುತ್ತಾ?. ಹಾಗೆಯೇ ಇಲ್ಲಿರುವ ಪ್ರಶ್ನೆ ಬಂದಾಗ ಇಲ್ಲಿ, ಅಲ್ಲಿರುವ ಪ್ರಶ್ನೆ ಬಂದಾಗ ಇಲ್ಲ. ಮೇಕೆದಾಟು ವಿಚಾರವಾಗಿ ಕರ್ನಾಟಕ ಬದ್ಧವಾಗಿದೆ. ಕುಡಿಯುವ ನೀರಿನ ವಿಚಾರವಾಗಿ ರಾಜಕಾರಣ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಚೆನ್ನಾಗಿರುವ ಸಂಸಾರಕ್ಕೆ ಹುಳಿ ಹಿಂಡಬೇಡಿ: ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಮಾಧ್ಯಮದವರು ಯಾರು ಯಾರನ್ನೋ ಬದಲಾಯಿಸುತ್ತೀರಾ. ನಿಮ್ಮ ಹೇಳಿಕೆಗೆ ಉತ್ತರ ಕೊಡಲು ಆಗುತ್ತಾ?. ಸಿ.ಟಿ ರವಿ ಆಕಾಂಕ್ಷಿ ಎಂಬುದಕ್ಕೆ ನಗುತ್ತಲೇ ಉತ್ತರ ಕೊಟ್ಟ ಅವರು, ನಮ್ಮಲ್ಲಿ ಆಸೆ, ಆಕಾಂಕ್ಷೆ ಏನು ನಡೆಯಲ್ಲ. ಏನಿದ್ದರೂ ಕಾರ್ಯಕರ್ತನಾಗಿ ಕೆಲಸ ಮಾಡಬೇಕು. ಜವಾಬ್ದಾರಿ ಬದಲಾಗುತ್ತದೆ. ಕಾರ್ಯಕರ್ತರ ಮನೋಭಾವನೆ ಬದಲಾಗಲ್ಲ. ಚೆನ್ನಾಗಿರುವ ಸಂಸಾರಕ್ಕೆ ಹುಳಿ ಹಿಂಡಬೇಡಿ ಎಂದು ನಗುತ್ತಾ ಉತ್ತರಿಸಿದರು.
ಸಂಜಯ್ ರಾವತ್ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪಕ್ಷ ಯಾವ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಬಂದಿದೆ ಎಂಬುವುದನ್ನು ಮೊದಲು ತಿಳಿದಿಕೊಳ್ಳಲಿ. 1993ರ ಬಾಂಬ್ ಸ್ಪೋಟವನ್ನೇ ಮರೆತು, ದಾವೂದ್ ಇಬ್ರಾಹಿಂ ಜತೆ ಸಂಬಂಧ ಇಟ್ಟುಕೊಂಡ ನವಾಬ್ ಮಲ್ಲಿಕ್ ಜತೆ ಅಧಿಕಾರ ಹಂಚಿಕೊಂಡ ಶಿವಸೇನೆ ಅದು. ಅವರು ಇಂದು ವಿಷಯಾಂತರ ಮಾಡುತ್ತಿದ್ದಾರೆ. ಕಾಶ್ಮೀರ ಫೈಲ್ಸ್ ಬಗ್ಗೆ ಅವರ ಅಭಿಪ್ರಾಯ ಏನು?. ಅದನ್ನ ಮೊದಲು ಸ್ಪಷ್ಟ ಪಡಿಸಲಿ. ಬಾಳ್ ಠಾಕ್ರೆಗೆ ಇದ್ದ ಅಭಿಪ್ರಾಯ ಈಗಲೂ ಇದ್ಯಾ, ಇಲ್ವೋ ಅನ್ನೋದನ್ನ ಸ್ಪಷ್ಟಪಡಿಸಲಿ ಎಂದು ಕಿಡಿಕಾರಿದರು.
ಮುಂಬೈಗಿಂತ ಚೆನ್ನಾಗಿ ಮರಾಠಿಗಳನ್ನ ಕನ್ನಡಿಗರು ನೋಡಿಕೊಂಡಿದ್ದಾರೆ. ನಮ್ಮಲ್ಲಿ ಯಾವುದೇ ರೀತಿಯ ತಾರತಮ್ಯ ಇಲ್ಲ. ವಿವಾದ ಅಲ್ಲದೇ ಇರುವುದನ್ನು ವಿವಾದ ಮಾಡಿದ್ರೆ ಏನು ಆಗುತ್ತದೆ ಎಮಬುವುದನ್ನು ತಿಳಿದುಕೊಳ್ಳಲಿ. ಕಾಶ್ಮೀರ ಫೈಲ್ಸ್ ಬಗ್ಗೆ ಸ್ಪಷ್ಟವಾದ ನಿಲುವನ್ನ ತಿಳಿಸಲಿ ಎಂದು ಸಿ.ಟಿ ರವಿ ಸವಾಲು ಹಾಕಿದರು.
ಇದನ್ನೂ ಓದಿ: ಗಾಂಧಿ ಕುಟುಂಬ ಇಲ್ಲ ಅಂದ್ರೆ ಕಾಂಗ್ರೆಸ್ಸೇ ಇಲ್ಲ : ಡಿಕೆಶಿ