ಬೆಂಗಳೂರು: ಕೊನೆಗೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ತಮ್ಮ ಸರ್ಕಾರಿ ವಸತಿಗೃಹವನ್ನು ಖಾಲಿ ಮಾಡಿದ್ದಾರೆ. ಕುಮಾರಕೃಪ ಪೂರ್ವದ ಗೃಹ ಸಂಖ್ಯೆ 3ಯಲ್ಲಿ ವಾಸವಾಗಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಬುಧವಾರ ತಮ್ಮ ಸರ್ಕಾರಿ ನಿವಾಸವನ್ನು ಖಾಲಿ ಮಾಡಿದ್ದಾರೆ.
ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಯೋಗೇಶ್ವರ ಆ ಮನೆಯನ್ನು ಬಿಟ್ಟು ಕೊಡಲು ಸಿದ್ಧರಿರಲಿಲ್ಲ. ಇನ್ನೂ ಮೂರು ತಿಂಗಳು ಅದೇ ಸರ್ಕಾರಿ ನಿವಾಸದಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿಗೆ ಈ ಹಿಂದೆ ಮನವಿ ಮಾಡಿದ್ದರು. ಆದರೆ ಸಚಿವ ಸ್ಥಾನ ಗಿಟ್ಟಿಸುವ ಕಸರತ್ತು ಫಲಿಸಿಲ್ಲ. ಇದೀಗ ಮೂರು ತಿಂಗಳ ಬಳಿಕ ಸಿ.ಪಿ. ಯೋಗೇಶ್ವರ್ ಮನೆ ಖಾಲಿ ಮಾಡಿದ್ದಾರೆ.
ಸಚಿವರಾದ ಕೆ.ಸಿ. ನಾರಾಯಣ ಗೌಡ, ಬಿ. ಶ್ರೀರಾಮುಲು ಮತ್ತು ಆನಂದ್ ಸಿಂಗ್ ಆ ನಿವಾಸವನ್ನು ತಮಗೆ ಹಂಚಿಕೆ ಮಾಡುವಂತೆ ಕೋರಿಕೆ ಸಲ್ಲಿಸಿದ್ದರು. ಇತ್ತ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡಾ ಅದೇ ಮನೆಯನ್ನು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ. ಅದರ ಜೊತೆಗೆ ಗಣಿ ಹಾಗೂ ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಕೂಡಾ ಅದೇ ಮನೆಯನ್ನು ಹಂಚಿಕೆ ಮಾಡುವಂತೆ ಮುಖ್ಯಮಂತ್ರಿಗೆ ದುಂಬಾಲು ಬಿದ್ದಿದ್ದರು.
ಇದೀಗ ಆ ನಿವಾಸವನ್ನು ಸಭಾಪತಿ ಬಸವರಾಜ್ ಹೊರಟ್ಟಿಗೆ ಹಂಚಿಕೆ ಮಾಡಲಾಗುತ್ತದೆ ಎನ್ನಲಾಗ್ತಿದೆ. ಸಭಾಪತಿ ಆ ಮನೆಗೆ ಬೇಡಿಕೆ ಇಟ್ಟಿದ್ದರು. ಸುಮಾರು ಎಂಟು ಬಾರಿ ಸರ್ಕಾರಕ್ಕೆ ಪತ್ರ ಬರೆದು ಮನೆ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದರು. ಇದೀಗ ಸಿ.ಪಿ.ಯೋಗೇಶ್ವರ್ ಮನೆ ಖಾಲಿ ಮಾಡಿದ ಹಿನ್ನೆಲೆ ಸಭಾಪತಿ ಹೊರಟ್ಟಿಗೆ ಆ ಮನೆ ಹಂಚಿಕೆಯಾಗಲಿದೆ ಎಂದು ಹೇಳಲಾಗ್ತಿದೆ.