ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆ, ರಾಜ್ಯದಲ್ಲಿ ಕೋವಿಡ್ ಪರೀಕ್ಷೆಯ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ. ಯಾವ ಜಿಲ್ಲೆಯಲ್ಲಿ ಕೊರೊನಾ ಪರೀಕ್ಷಾ ಸಂಖ್ಯೆ ಯಾವ ರೀತಿಯಿದೆ ಎಂಬುದರ ಒಂದು ವರದಿ ಇಲ್ಲಿದೆ.
ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಪರೀಕ್ಷೆಯ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ. ಆದರೂ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿಲ್ಲ. ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಪರೀಕ್ಷಾ ಕಿಟ್ಗಳ ಕೊರತೆಯಿಲ್ಲ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಪರೀಕ್ಷೆಗಳು ನಡೆಯುತ್ತಿಲ್ಲ.
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಸದ್ಯದ ಮಟ್ಟಿಗೆ ಸರಾಗವಾಗಿ ನಡೆಯುತ್ತಿದ್ದು, ಕೋವಿಡ್ ಟೆಸ್ಟ್ ನಡೆಸಲು ಜಿಲ್ಲೆಯಲ್ಲಿ ಯಾವುದೇ ಅಡೆ ತಡೆಗಳಿಲ್ಲ. ಜಿಲ್ಲೆಯಲ್ಲಿ 120 ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು, ಇದಲ್ಲದೆ ಸಮುದಾಯಗಳ ಪರೀಕ್ಷೆ ನಡೆಸಲು ತಂಡಗಳನ್ನು ರಚನೆ ಮಾಡಿ, ಅವರಿಗೆ ರಾಪಿಡ್ ಹಾಗೂ ಆರ್ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಇದುವರೆಗೂ ಶಿವಮೊಗ್ಗದಲ್ಲಿ 30 ಸಾವಿರ ರಾಪಿಡ್ ಕಿಟ್ ಮೂಲಕ ಪರೀಕ್ಷೆ ನಡೆಸಲಾಗಿದ್ದು, 42 ಸಾವಿರ ಆರ್ಟಿಪಿಸಿಆರ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಪ್ರತಿ ದಿನ ಕನಿಷ್ಠ ಸಾವಿರ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇನ್ನು ಗಣಿನಾಡು ಬಳ್ಳಾರಿಯಲ್ಲಿ ಈ ಹಿಂದೆ ಕೋವಿಡ್ ಸೋಂಕಿತರ ಸಂಖ್ಯೆ 500 ರಿಂದ 800ರ ಗಡಿ ದಾಟುತ್ತಿತ್ತು. ಆದರೆ ಇದೀಗ ಕೇವಲ 300-500ರೊಳಗೆ ಕೋವಿಡ್ ಸೋಂಕಿತರ ಸಂಖ್ಯೆ ಕಂಡು ಬರುತ್ತಿದೆ. ಮೊದಲು ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರು ಹೆಚ್ಚಿದ್ದರಿಂದ ಹೆಚ್ಚಾಗಿ ಟೆಸ್ಟ್ ಮಾಡಲಾಗಿತ್ತು. ಆದರೆ, ಪ್ರಾಥಮಿಕ ಸಂಪರ್ಕಿತರು ಕಡಿಮೆಯಾಗಿದ್ದು, ಹಾಗಾಗಿ ಕಡಿಮೆ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ.
ದಾವಣಗೆರೆಯಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಸೋಂಕಿನ ಹಾಟ್ ಸ್ಪಾಟ್ ನಗರಗಳಲ್ಲಿ ಬೆಣ್ಣೆ ನಗರಿಯೂ ಒಂದು. ಜಿಲ್ಲೆಯಲ್ಲಿ 1,10,576 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 75 ಸಾವಿರ ಆರ್ಟಿಪಿಸಿಆರ್, 35 ಸಾವಿರದದಷ್ಟು ರಾಪಿಡ್ ಟೆಸ್ಟ್ ಮಾಡಲಾಗಿದೆ.
ಕೊರೊನಾ ನಿಯಂತ್ರಣ ಹಾಗೂ ಪರೀಕ್ಷೆ ಸೇರಿದಂತೆ ಇತರೆ ವಿಭಾಗಗಳಲ್ಲಿ ಸುಮಾರು 31 ಮೊಬೈಲ್ ಟೀಂಗಳನ್ನು ರಚಿಸಲಾಗುತ್ತಿದ್ದು, ನಿತ್ಯವೂ 2,500 ಕೊರೊನಾ ಟೆಸ್ಟ್ ಮಾಡುವಂತೆ ಸರ್ಕಾರದಿಂದ ಆದೇಶ ಬಂದಿದ್ದು, ಇದನ್ನು ಪಾಲಿಸಲಾಗುತ್ತಿದೆ. ನಿತ್ಯವೂ 2,500 ಜನರ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತಿದ್ದು, ಮರಣ ಪ್ರಮಾಣ ಕಡಿಮೆ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ.
ಒಟ್ಟಾರೆ ಹೇಳುವುದಾದರೆ ಇತ್ತ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರ ಜೊತೆಗೆ ರಾಜ್ಯದಲ್ಲಿ ಕೋವಿಡ್ ಪರೀಕ್ಷೆಯ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ. ಕೊರೊನಾ ಪರೀಕ್ಷಾ ಕಿಟ್ಗಳ ಕೊರತೆಯಿಲ್ಲದಿದ್ದರೂ, ಜನಸಂಖ್ಯೆಗೆ ಅನುಗುಣವಾಗಿ ಪರೀಕ್ಷೆಗಳು ನಡೆಯುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ.