ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ಹಾಗೂ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದ್ದು, ನಾಳೆಯಿಂದಲೇ ಯುನಾನಿ ಕಾಲೇಜಿನಲ್ಲಿ ಕೋವಿಡ್ ಸೆಂಟರ್ ಆರಂಭಿಸಲಾಗುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಗೋವಿಂದರಾಜ ನಗರ ಹಾಗೂ ಮಹಾಲಕ್ಷ್ಮಿ ಲೇಔಟ್‍ನ ಆಸ್ಪತ್ರೆಯಲ್ಲಿ ಇಂದು ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ದೊಡ್ಡ ಆಸ್ಪತ್ರೆಗಳಿಲ್ಲ. ಪುಣ್ಯ ಮತ್ತು ಗಾಯತ್ರಿ ಆಸ್ಪತ್ರೆ ಮಾತ್ರ ಇದ್ದು, ಪುಣ್ಯ ಆಸ್ಪತ್ರೆಯಲ್ಲಿ ವೈದ್ಯರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಜನರಿಗೆ ಚಿಕಿತ್ಸೆ ನೀಡಲು ನೆರವಾಗುವ ನಿಟ್ಟಿನಲ್ಲಿ ಯುನಾನಿ ಕಾಲೇಜಿನಲ್ಲಿ ನಾಳೆಯಿಂದಲೇ ಕೋವಿಡ್ ಕೇಂದ್ರ ಆರಂಭಿಸಲಾಗುತ್ತದೆ ಎಂದರು.
ಈ ಹಿಂದಿನಂತೆ ಹೋಂ ಐಸೊಲೇಷನ್ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಮನೆಗಳಿಗೆ ಅಗತ್ಯವಿರುವ ಔಷಧಿ, ವೈದ್ಯರ ಸಲಹೆಯಂತಹ ವ್ಯವಸ್ಥೆ ಮಾಡಲಾಗುತ್ತಿದೆ. ಜನ ಗಾಬರಿಯಾಗುವುದು ಬೇಡ. ಧೃತಿಗೆಡಬೇಡಿ, ಗಂಭೀರ ಪರಿಸ್ಥಿತಿ ಇದ್ದರೆ ಮಾತ್ರ ಆಸ್ಪತ್ರೆಗೆ ಬನ್ನಿ. ಇಲ್ಲದಿದ್ದರೆ ಮನೆಯಲ್ಲೇ ಚಿಕಿತ್ಸೆ ಪಡೆಯಲು ಅವಕಾಶವಿದೆ. ಎಲ್ಲೆಡೆ ರಸ್ತೆಗಳಲ್ಲಿ ಸೋಂಕು ನಿವಾರಕ ದ್ರಾವಣವನ್ನು ಸಹ ಸಿಂಪಡಣೆ ಮಾಡಲಾಗುತ್ತಿದೆ. ಅನಾವಶ್ಯಕವಾಗಿ ಮನೆಗಳಿಂದ ಹೊರ ಬರಬೇಡಿ ಎಂದು ಮನವಿ ಮಾಡಿದರು.
ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ, ಕೈಗಳನ್ನು ಸ್ಯಾನಿಟೈಜ್ ಮಾಡಿ. ಕೆಲಸವಿಲ್ಲದಿದ್ದರೆ ಮನೆಯಲ್ಲೇ ಇರಿ. ಇದರಿಂದ ಬೇರೆಯವರಿಗೂ ಅನುಕೂಲ, ನಿಮಗೂ ಅನುಕೂಲ. ಸರ್ಕಾರದ ಎಲ್ಲಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ ಎಂದು ಸಲಹೆ ನೀಡಿದರು.