ಬೆಂಗಳೂರು : ಕೊರೊನಾ ಅದೆಷ್ಟೋ ಭವಿಷ್ಯದ ಕನಸು ಹೊತ್ತ ಗರ್ಭಿಣಿಯರಿಗೂ ನೋವು ಕೊಟ್ಟಿದೆ. ಕಂದನನ್ನು ಎದೆಗಪ್ಪಿ ಮುದ್ದಾಡುವ ಕ್ಷಣ ಕೂಡ ಈ ಮಹಾಮಾರಿ ದೂರಾಗಿಸಿದೆ. ಈ ಸಮಯದಲ್ಲಿ ವೈದ್ಯರು ತಾಯಿ ಮಗುವಿನ ಆರೈಕೆ ಮಾಡ್ತಿರುವ ರೀತಿಯಿಂದಾಗಿ ಅವರ ಬಗೆಗಿನ ಗೌರವ ಇಮ್ಮಡಿಯಾಗ್ತಿದೆ. ಗರ್ಭಿಣಿಯರನ್ನೂ ಈ ಕೊರೊನಾ ಬಿಟ್ಟಿಲ್ಲ. ಸೋಂಕಿತ ಗರ್ಭಿಣಿಯರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ, ವೇಳೆ ತಾಯಿ ಮತ್ತು ಮಗುವಿನ ಬಗ್ಗೆ ಮೊದಲಿಗಿಂತಲೂ ಹೆಚ್ಚಿನ ಜಾಗೃತೆವಹಿಸಬೇಕಾಗುತ್ತದೆ.
ಹಾಗಾಗಿ, ವೈದ್ಯರು ವಿಶೇಷ ಕಾಳಜಿ ತೆಗೆದುಕೊಳ್ತಾರೆ. ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆಂದೇ ಕೋವಿಡ್ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಇರುತ್ತೆ. ಹೆರಿಗೆಯಾದ ಕೂಡ್ಲೇ ತಾಯಿ-ಮಗು ಬೇರ್ಪಡಿಸಿ, ಕೊರೊನಾ ತಗುಲದಂತೆ ಎಚ್ಚರಿಕೆ ವಹಿಸಲಾಗುತ್ತದೆ. ನೆಗಟಿವ್ ಬಂದ ನಂತರವಷ್ಟೇ ಮಗುವನ್ನ ತಾಯಿಯ ಬಳಿ ಬಿಡಲಾಗುತ್ತದೆ.
ಬೆಂಗಳೂರಿನ ಪ್ರತಿಷ್ಠಿತ ವಾಣಿವಿಲಾಸ ಆಸ್ಪತ್ರೆಯಲ್ಲಿ 260ಕ್ಕೂ ಹೆಚ್ಚು ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ. ಇಲ್ಲಿ ಹಸುಗೂಸು ಮಕ್ಕಳ ಪಾಲಿಗೆ ಕೊರೊನಾ ವಾರಿಯರ್ಗಳೇ ತಾಯಂದಿರಾಗಿದ್ದಾರೆ. ರಾಜ್ಯದ ಅನೇಕ ಜಿಲ್ಲಾ ಕೇಂದ್ರ ಕೇಂದ್ರಗಳಲ್ಲಿ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ ಮಾಡಿಸಲಾಗಿದೆ.
ಸೋಂಕಿತ ಬಾಣಂತಿ ಎದೆ ಹಾಲು ಕುಡಿಯುವ ಶಿಶುವಿಗೆ, ಕೋವಿಡ್ ಸೋಂಕು ಅಂಟುವುದಿಲ್ಲ ಎಂಬು ಅಧ್ಯಯನವೊಂದು ಹೇಳಿದೆ. ಆದರೆ, ಇದು ಅತೀ ಸೂಕ್ಷ್ಮ ವಿಚಾರ. ತಾಯಿಯ ಹತ್ತಿರದ ಸಂಪರ್ಕದಿಂದ ಮಗುವಿಗೆ ಸೋಂಕು ಹರಡುವ ಸಾಧ್ಯತೆಯೇ ಹೆಚ್ಚು. ತಾಯಿ ಹಾಲುಣಿಸುವಾಗ ಮಾಸ್ಕ್ ಬಳಕೆ, ನಂತರ 6 ಅಡಿ ಅಂತರದಲ್ಲಿ ಮಗು ತಾಯಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ.
ಕೊರೊನಾ ತಡೆಗೆ ಸಾಮಾಜಿಕ ಅಂತರ ತುಂಬಾ ಮುಖ್ಯ. ಇದರಿಂದ ತಾಯಿಗೆ ಮಗು ಮುದ್ದಿಸಿ, ಪ್ರೀತಿ ತೊರಲಾಗದೇ ಇರಬಹುದು. ಆದರೆ, ಇದು ಅನಿವಾರ್ಯ. ಇಂಥ ವೇಳೆ ವೈದ್ಯರ ಕಾರ್ಯಕ್ಕಂತೂ ಅದೆಷ್ಟು ಶ್ಲಾಘನೆ ವ್ಯಕ್ತಪಡಿಸಿದರೂ ಅದು ಸಾಲೋದಿಲ್ಲ.