ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಮಪತ್ರದ ದೃಢೀಕೃತ ಪ್ರತಿಯನ್ನು ಕೋರ್ಟ್ಗೆ ನೀಡುವಂತೆ ಅರ್ಜಿದಾರರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ.
ಅರ್ಜಿದಾರರು ಆದ ಪ್ರಜ್ಞಾವಂತ ನಾಗರಿಕ ಸಮಿತಿಯ ಅಧ್ಯಕ್ಷ ಆನಂದ್ ಅವರು, ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ನಾಮಪತ್ರದ ದೃಢೀಕರಣ ಪ್ರತಿಯನ್ನ ಒದಗಿಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಬೇಕೆಂದು ಮನವಿ ಮಾಡಿದ್ದರು. ಇದಕ್ಕೊಪ್ಪದ ಕೋರ್ಟ್, ಅರ್ಜಿದಾರರು ಆದ ನೀವೇ ದಾಖಲೆಗಳನ್ನ ಒದಗಿಸಬೇಕು ಎಂದು ಆದೇಶಿಸಿ ವಿಚಾರಣೆಯನ್ನ ಅಕ್ಟೋಬರ್ 18ಕ್ಕೆ ಮುಂದೂಡಿದೆ. ಒಂದು ಹಂತದಲ್ಲಿ ಅರ್ಜಿದಾರರನ್ನ ತರಾಟೆ ತೆಗೆದುಕೊಂಡ ನ್ಯಾಯಾಧೀಶರು, ಕೋರ್ಟ್ ಹೇಳಿದ ಕೆಲಸ ಮೊದಲು ಮಾಡಿ, ನ್ಯಾಯಲಯಕ್ಕೆ ಸೂಚನೆ ಕೊಡಬೇಡಿ ಎಂದು ಗರಂ ಆದರು ಎಂದು ತಿಳಿದುಬಂದಿದೆ.
ಮಾಜಿ ಸಿಎಂ ಕುಮಾರಸ್ವಾಮಿಯವರು ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಂದರ್ಭದಲ್ಲಿ ಸಲ್ಲಿಸಿದ್ದ ನಾಮಪತ್ರದಲ್ಲಿ ಸಂಬಂಧಿಕರ ಹೆಸರನ್ನ ನಮೂದಿಸಿಲ್ಲ. ಇನ್ನು ಪ್ರಮಾಣ ಪತ್ರದಲ್ಲಿ ಎರಡನೇ ಪತ್ನಿ ರಾಧಿಕ ಹೆಸರನ್ನ ಪ್ರಸ್ತಾಪಿಸಿ, ಉದ್ದೇಶಪೂರಕಾವಾಗಿ ಹೆಸರು ಕೈಬಿಡಲಾಗಿದೆ. ಅಲ್ಲದೆ, ಮಕ್ಕಳಾದ ನಿಖಿಲ್ ಹಾಗೂ ಶಮಿಕಾ ಹೆಸರನ್ನೂ ಸಹ ನಮೂದಿಸಿಲ್ಲ. ಈ ಮೂಲಕ ಕುಮಾರಸ್ವಾಮಿ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಅರ್ಜಿದಾರರು ಆರೋಪಿಸಿದ್ದಾರೆ.
ರಾಧಿಕಾ ಕುಮಾರಸ್ವಾಮಿ, ಮಗಳು ಶಮಿಕಾ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇದೆ. ಈ ಬಗ್ಗೆ ಜನಪ್ರಿನಿಧಿಗಳ ಕಾಯ್ದೆ 125A ಐಪಿಸಿ 181ರ ಅಡಿ ಕ್ರಮ ತೆಗೆದುಕೊಳ್ಳುವಂತೆ ಆನಂದ್ ಮನವಿ ಮಾಡಿದ್ದರು. ಅಲ್ಲದೇ ಈ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸುವಂತೆ ಕೋರಿದ್ದರು.