ಬೆಂಗಳೂರು : ವಿಧಾನಪರಿಷತ್ ಕಲಾಪವನ್ನು ಬುಧವಾರದವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
ವಿಧಾನಸೌಧದಲ್ಲಿ ಉಪಸಭಾಪತಿ ಪ್ರಾಣೇಶ್ ನೇತೃತ್ವದಲ್ಲಿ ನಡೆದ ಪರಿಷತ್ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡಿರುವ ಹಿನ್ನೆಲೆ ಸಭಾಪತಿ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಬೇಕಿದೆ. ಈ ಹಿನ್ನೆಲೆ ಇದಕ್ಕೆ ಅನುಕೂಲ ಕಲ್ಪಿಸಲು ಕಲಾಪವನ್ನು ಮೂರು ದಿನ ವಿಸ್ತರಿಸಲು ತೀರ್ಮಾನಿಸಲಾಗಿದೆ.
ಕಲಾಪ ಸಲಹಾ ಸಮಿತಿ ಸಭೆಯ ನಂತರ ಮಾತನಾಡಿದ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ನಿಗದಿಯಂತೆ ಇಂದು ವಿಧಾನ ಪರಿಷತ್ ಕಲಾಪ ಮುಕ್ತಾಯವಾಗಬೇಕಿತ್ತು. ಆದರೆ, ಮುಂದಿನ ಬುಧವಾರದವರೆಗೆ ಪರಿಷತ್ ಕಲಾಪ ಮುಂದುವರೆಸಲು ನಿರ್ಧಾರ ಮಾಡಲಾಗಿದೆ.
ಸಭಾಪತಿ ಆಯ್ಕೆ ಹಿನ್ನೆಲೆ ಕಲಾಪವನ್ನು ಮುಂದುವರಿಕೆ ಮಾಡಲು ತೀರ್ಮಾನಿಸಲಾಗಿದೆ. ಸಭಾಪತಿ ಸ್ಥಾನಕ್ಕೆ ನಮ್ಮ ಪಕ್ಷದಿಂದ ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ ಎಂದರು. ಇನ್ನು, ಗೋಹತ್ಯೆ ತಡೆ ಮಸೂದೆ ವಿಚಾರದಲ್ಲಿ ಜೆಡಿಎಸ್ ನಿಲುವು ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ನಮ್ಮ ಪಕ್ಷದ ವರಿಷ್ಠರನ್ನು ಕೇಳಿ ಹೇಳುತ್ತೇನೆ.
ಕ್ಯಾಬಿನೆಟ್ ಹಾಲ್ಗೆ ಸಂಪುಟ ಸಭೆ ಶಿಫ್ಟ್ : ಕಳೆದ 10 ತಿಂಗಳ ನಂತರ ಮೊದಲ ಬಾರಿಗೆ ವಿಧಾನಸೌಧದ ಕ್ಯಾಬಿನೆಟ್ ಹಾಲ್‌ನಲ್ಲಿ ಸಭೆ ನಡೆಸಲಾಯಿತು. ಕೊರೊನಾ ಬಂದಾಗಿನಿಂದ ಸಚಿವ ಸಂಪುಟ ಸಭೆ ಕ್ಯಾಬಿನೆಟ್ ಹಾಲ್‌ನಲ್ಲಿ ನಡೆಸುತ್ತಿರಲಿಲ್ಲ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆ ಸಚಿವ ಸಂಪುಟ ಸಭೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಸಲಾಗುತ್ತಿತ್ತು. ಇದೀಗ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆ ಕ್ಯಾಬಿನೆಟ್ ಹಾಲ್‌ನಲ್ಲಿ ಸಂಪುಟ ಸಭೆ ನಡೆಸಲಾಯಿತು.