ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ನಿರಂತರ ಭ್ರಷ್ಟಾಚಾರ ಆರೋಪಪಟ್ಟಿ ಸಲ್ಲಿಕೆಯಾಗುತ್ತಿದ್ದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡದೆ ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ. ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ಶಾಸಕರೇ ಯಡಿಯೂರಪ್ಪ ಹಾಗೂ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಬಹಿರಂಗಪಡಿಸುತ್ತಿದ್ದರೂ ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರಿಯುವ ಮೂಲಕ ತಮ್ಮ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ಮೋದಿ ಮಾತನಾಡುತ್ತಾರೆ. ಆದರೆ ವಾಮಮಾರ್ಗದಲ್ಲಿ ಭ್ರಷ್ಟಾಚಾರವನ್ನೇ ಬೆಂಬಲಿಸುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರು ವಿಫಲವಾಗಿದ್ದಾರೆ. ಸಿಡಿ ಹಗರಣದಲ್ಲಿ ಸಿಲುಕಿರುವ ಬಿಜೆಪಿ ನಾಯಕರನ್ನ ರಕ್ಷಿಸಲು ಎಸ್ಐಟಿಯನ್ನು ರಚಿಸಲಾಗಿದೆ ಎಂದು ದೂರಿದರು.
ಬಿಜೆಪಿ ನಾಯಕರೇ ಸಿಡಿ ಹಗರಣದಲ್ಲಿ ಪಕ್ಷದ ನಾಯಕರ ಪಾತ್ರವಿದೆ ಎಂದು ಬಹಿರಂಗಪಡಿಸುತ್ತಿದ್ದಾರೆ, ಹೆಚ್ ವಿಶ್ವನಾಥ್, ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿನಿತ್ಯ ಭ್ರಷ್ಟಾಚಾರದ ಬಗ್ಗೆ ಸಿಡಿ ಹಗರಣಗಳ ಬಗ್ಗೆ ಬಹಿರಂಗವಾಗಿ ವಾಕ್ಸಮರ ನಡೆಸುತ್ತಿದ್ದರೂ ಇದರ ಬಗ್ಗೆ ಗಮನ ಹರಿಸದೆ ಬಿಜೆಪಿ ವರಿಷ್ಠರು ಕೈಚೆಲ್ಲಿ ಕುಳಿತಿದ್ದಾರೆ ಎಂದು ಹೋರಾಟಗಾರರು ಕಿಡಿಕಾರಿದರು.