ಬೆಂಗಳೂರು: ದಿನೇದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇಂದು ಕೂಡ 41 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ 794ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, 386 ಜನ ಗುಣಮುಖರಾಗಿದ್ದಾರೆ. ಬಾಕಿ 377 ಜನರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 6 ಮಂದಿಯನ್ನು ಐಸಿಯುನಲ್ಲಿ ಇಡಲಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಪರೀಕ್ಷೆ 1,30,098ರ ಗಡಿ ದಾಟಿದೆ.
ಸೋಂಕಿತ-ಶಂಕಿತ ಪ್ರಕರಣಗಳ ಬಿಡುಗಡೆ ಮಾಹಿತಿ ಕಡ್ಡಾಯ
ವೈದ್ಯಕೀಯ ಅಧೀಕ್ಷಕರು, ಆಡಳಿತ ಆರೋಗ್ಯ ಅಧಿಕಾರಿಗಳು ಅಥವಾ ಉಸ್ತುವಾರಿ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಆರೋಗ್ಯ ಕೇಂದ್ರಗಳಲ್ಲಿನ ಕೋವಿಡ್-19 ಸೋಂಕಿತ, ಶಂಕಿತ ಪ್ರಕರಣಗಳ ಆಸ್ಪತ್ರೆ ಬಿಡುಗಡೆಯ ಮಾಹಿತಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು. ಇದಾದ ಬಳಿಕ ಅವರನ್ನ ಬಿಡುಗಡೆ ಮಾಡಬೇಕೆಂದು ಆದೇಶಿಸಲಾಗಿದೆ.
ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಿಗೆ ಪರಿಷ್ಕೃತ ಕ್ವಾರಂಟೈನ್
ಪ್ರಾಥಮಿಕ ಹಂತದ ಸಂಪರ್ಕಿತರನ್ನ ಯಾವ ರೀತಿ ಸೌಲಭ್ಯದೊಂದಿಗೆ ಕ್ವಾರಂಟೈನ್ ಮಾಡಬೇಕು ಎನ್ನುವ ಕುರಿತು ಡಾ.ಎಂ.ಕೆ.ಸುದರ್ಶನ್ ಅವರ ತಜ್ಞರ ಸಮಿತಿ ವರದಿ ಸಲ್ಲಿಸಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಿಗೆ ಪರಿಷ್ಕೃತ ಕ್ವಾರಂಟೈನ್ ಜಾರಿ ಮಾಡಲಾಗಿದೆ. ಪ್ರಸ್ತುತ ಪ್ರಾರ್ಥಮಿಕ ಸಂಪರ್ಕಿತರನ್ನು ಹೋಟೆಲ್, ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ ಈಗ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವರೊಂದಿಗಿನ ಸಂಪರ್ಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದಾಗಿ ಕ್ವಾರಂಟೈನ್ ಪ್ರಕ್ರಿಯೆಯಲ್ಲಿ ಸಂಪರ್ಕಿತ ರ ಮೇಲ್ವಿಚಾರಣೆ ಮಾಡುವ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ವಾರಂಟೈನ್ ಪ್ರಕ್ರಿಯೆಯಲ್ಲಿ ತಿದ್ದುಪಡಿ ಮಾಡಲಾಗಿದೆ.
ಪ್ರಾಥಮಿಕ ಸಂಪರ್ಕಿತರ ಕ್ವಾರಂಟೈನ್ ಮಾಡುವ ಪ್ರಕ್ರಿಯೆ
1) ಒಮ್ಮೆ ಪ್ರಾಥಮಿಕ ಸಂಪರ್ಕಿತರನ್ನ ಗುರುತಿಸಿದ ಬಳಿಕ ಅವರ ಮಾಹಿತಿಯನ್ನು ಮೊಬೈಲ್ ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್ನಲ್ಲಿ ನಮೂದಿಸಬೇಕು.
2) ವ್ಯಕ್ತಿಯ ಆರೋಗ್ಯ ಸ್ಥಿತಿಗತಿಯನ್ನ ತಪಾಸಣೆ ಮಾಡಬೇಕು.
3) ಸಂಪರ್ಕಿತರು ಸೋಂಕಿನ ಲಕ್ಷಣಗಳನ್ನು ಹೊಂದಿದ್ದರೆ ತಪಾಸಣೆಗೆ ಕಳುಹಿಸಬೇಕು.ಸೋಂಕು ದೃಢವಾದರೆ ಕೋವಿಡ್ ಆಸ್ಪತ್ರೆಗಳಿಗೆ ಕಳುಹಿಸಬೇಕು. ಸೋಂಕು ದೃಢವಾಗದಿದ್ದರೆ ಗೃಹ ಅಥವಾ ಸೂಕ್ತ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಬೇಕು.
4) ರೋಗಲಕ್ಷಣ ಇಲ್ಲದ ಸಂಪರ್ಕಿತರಾಗಿದ್ದರೆ ಅಂತಹವರ ಮನೆಯನ್ನು ಪರಿಶೀಲನೆಗೆ ಒಳಪಡಿಸಬೇಕು. ಕ್ವಾರಂಟೈನ್ಗೆ ಮನೆ ಸೂಕ್ತವಾಗಿದೆಯಾ ಅಥವಾ ಸೌಲಭ್ಯಗಳಿವೆಯಾ ಎಂದು ಪರಿಶೀಲನೆ ನಡೆಸಬೇಕು.
5) ಆ ಮನೆ ಸೂಕ್ತವಾಗಿದ್ದರೆ ಹೋಂ ಕ್ವಾರಂಟೈನ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಇಲ್ಲವಾದರೆ ನಿಗದಿತ ಕೇಂದ್ರಗಳಲ್ಲಿ 14 ದಿನಗಳ ಕ್ವಾರಂಟೈನ್ಗಾಗಿ ಕಳುಹಿಸಬೇಕು.
6) ನೆರೆಹೊರೆಯ ಸಂಪರ್ಕ ಸಂಖ್ಯೆಯನ್ನು ಪಡೆದುಕೊಳ್ಳಬೇಕು. ಆ ಸಂಪರ್ಕಿತ ಹೋಂ ಕ್ವಾರಂಟೈನ್ ನಿಯಮಗಳನ್ನು ಅನುಸರಿಸುತ್ತಿರುವ ಬಗ್ಗೆ ಐವಿಆರ್-ಎಸ್ ಕರೆ ಮಾಡಿ ಧೃಡಪಡಿಸಿಕೊಳ್ಳುವುದು.
7) ಕ್ವಾರಂಟೈನ್ ಇರುವವರನ್ನು ವಾಚ್ ಆ್ಯಪ್- ಅಲರ್ಟ್ ಸಿಸ್ಟಮ್ ಮೂಲಕ ಗಮನಿಸುವುದು.
8) ಲಕ್ಷಣಗಳಿಲ್ಲದೇ ಇದ್ದರೆ 5-7 ದಿನಗಳ ಅವಧಿಯಲ್ಲಿ ಮೊದಲ ಪರೀಕ್ಷೆ ಮತ್ತು 14ನೇ ದಿನ ಎರಡನೇ ಬಾರಿ ಪರೀಕ್ಷೆ ಮಾಡಬೇಕು.
ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡುವ ಪ್ರಕ್ರಿಯೆ
1) ಒಮ್ಮೆ ಎರಡನೇ ಹಂತದ ಸಂಪರ್ಕಿತರು ಪತ್ತೆಯಾದ ಬಳಿಕ ಅವರ ಮಾಹಿತಿಯನ್ನು ಸಂಪರ್ಕಿತ ಅರ್ಜಿಗೆ ಭರ್ತಿ ಮಾಡಬೇಕು
2) ಎರಡನೇ ಹಂತದ ಸಂಪರ್ಕಿತರನ್ನ ಹೋಂ ಕ್ವಾರಂಟೈನ್ಗೆ ಒಳಪಡಿಸಿ ತಕ್ಷಣ ಕೋವಿಡ್-19 ಪರೀಕ್ಷೆಯನ್ನು ನಡೆಸಬೇಕು.
3) ಹೋಂ ಕ್ವಾರಂಟೈನ್ ನಲ್ಲಿರುವ ಎರಡನೇ ಹಂತದ ಸಂಪರ್ಕಿತರ ಎಡಗೈನ ಹಸ್ತದ ಹಿಂಭಾಗಕ್ಕೆ ಮುದ್ರೆ ಹಾಕಬೇಕು. ಮನೆಯ ಹೊರಭಾಗದಲ್ಲಿ ಪೋಸ್ಟರ್ ಅಂಟಿಸಬೇಕು.
ವಿಶೇಷವಾಗಿ ಪರಿಗಣಿಸಲ್ಪಡುವ ಪ್ರಾಥಮಿಕ ಸಂಪರ್ಕಿತರು
ಪ್ರಾಥಮಿಕ ಸಂಪರ್ಕಿತರಲ್ಲಿ ಕೆಲವರನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ. ಅವರೆಂದರೆ 60 ವರ್ಷ ಮೇಲ್ಪಟ್ಟವರು, ಇತರ ಆರೋಗ್ಯ ಸಮಸ್ಯೆಗಳು ಇರುವವರು ವಿಶೇಷ ಸಂಪರ್ಕಿತರು.